ಬೆಂಗಳೂರು : ಕೊರೊನಾದಿಂದಾಗಿ ಸಿಬಿಎಸ್ಇ 10-12ನೇ ತರಗತಿ ಪರೀಕ್ಷೆ ರದ್ದು ಪಡಿಸಲಾಗಿತ್ತು. ಪರ್ಯಾಯ ಮೌಲ್ಯಮಾಪನ ಪದ್ಧತಿ ಪ್ರಕಾರ ಫಲಿತಾಂಶವನ್ನ ಆಗಸ್ಟ್ 3ರಂದು ಪ್ರಕಟಿಸಲಾಗಿತ್ತು. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕೆಲ ಖಾಸಗಿ ಶಾಲೆಗಳು ಫಲಿತಾಂಶದಲ್ಲಿ ಗೋಲ್ಮಾಲ್ ನಡೆಸಿರು ಆರೋಪ ಕೇಳಿ ಬಂದಿದೆ.
ಖಾಸಗಿ ಶಾಲೆಯಲ್ಲಿ ಸಂಪೂರ್ಣ ಶುಲ್ಕ ಭರಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ನೀಡಿ, ಶುಲ್ಕ ಪಾವತಿ ಬಾಕಿ ಉಳಿಸಿಕೊಂಡ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಸಹಕಾರ ನಗರದ ನಾರಾಯಣ ಓಲಂಪಿಯಾಡ್ ಶಾಲೆ ವಿರುದ್ಧ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಯ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಪೋಷಕರು ಜಮಾಯಿಸಿದ್ದರು.
ಸಿಬಿಎಸ್ಇ 10ನೇ ತರಗತಿ ಫಲಿತಾಂಶದಲ್ಲಿ ಈ ಶಾಲೆಯು ಗೋಲ್ಮಾಲ್ ನಡೆಸಿದೆ. ಪರೀಕ್ಷೆ ರದ್ದಾದ ಕಾರಣ ಮೌಲ್ಯಾಂಕನ, ಪೂರ್ವ ಸಿದ್ಧತಾ ಪರೀಕ್ಷೆ, ಪ್ರಾಯೋಗಿಕ ಅಂಕಗಳ ಮೇಲೆ ಫಲಿತಾಂಶ ಪ್ರಕಟಿಸುವಂತೆ ಬೋರ್ಡ್ ಸೂಚಿಸಿತ್ತು.
ಆದರೆ, ಕೆಲ ಖಾಸಗಿ ಶಾಲೆಗಳು ಇದನ್ನೇ ಬಂಡವಾಳ ಮಾಡಿಕೊಂಡು, ಸೂಲ್ಕ್ ಫೀಸ್ ಕಟ್ಟಿದವರಿಗೆ ಹೆಚ್ಚಿನ ಅಂಕ ಕೊಟ್ಟು, ಕಟ್ಟದೇ ಇರೋರಿಗೆ ಕಡಿಮೆ ಅಂಕ ನೀಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಹೀಗಾಗಿ, ಶಾಲೆ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿ, ಯಲಹಂಕ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಪೋಷಕರು -ವಿದ್ಯಾರ್ಥಿಗಳು ಜಮಾಯಿಸಿ, ತಮ್ಮ ಮಕ್ಕಳು ಎಲ್ಲದರಲ್ಲೂ ಉತ್ತಮ ಅಂಕಗಳಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಈ ರೀತಿ ಮಾಡಿರುವುದು ಸರಿಯಲ್ಲ ಅಂತಾ ದೂರಿದ್ದಾರೆ.
ಓದಿ: ಮೂರನೇ ಅಲೆ ಭೀತಿ: ಮಹತ್ವದ ಸಭೆ ಕರೆದ ಸಿಎಂ... ನೈಟ್ ಕರ್ಫ್ಯೂ ಜಾರಿಗೆ ಚಿಂತನೆ?