ಬೆಂಗಳೂರು : ಡಿಸೆಂಬರ್ ಅಂತ್ಯದವರೆಗೆ ಶಾಲೆ ಪುನರಾರಂಭ ಮಾಡುವುದಿಲ್ಲ ಎಂಬ ಸರ್ಕಾರದ ನಿರ್ಧಾರವನ್ನು ಪೋಷಕರು ಸ್ವಾಗತಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಿವಾಸಿ ಚಿತ್ರಾ ಹರ್ಷ, ಸರ್ಕಾರದ ನಿರ್ಧಾರ ನಿಜಕ್ಕೂ ಒಳ್ಳೆಯದು. ಇತ್ತೀಚೆಗೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗಿದೆ, ಆದರೆ ಸೋಂಕು ಸಂಪೂರ್ಣ ಕಡಿಮೆಯಾಗಿಲ್ಲ. ಮಕ್ಕಳನ್ನು ಶಾಲೆಗೆ ಕಳಿಸಿದಾಗ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕೋವಿಡ್ ಲಸಿಕೆ ಬರುವವರೆಗೆ ಶಾಲೆ ಪುನರರಾಂಭ ಮಾಡದಿರುವುದೇ ಒಳಿತು ಎಂದಿದ್ದಾರೆ.
ಮತ್ತೊಬ್ಬರು ಬೆಂಗಳೂರು ನಿವಾಸಿ ಅನಿಲ್ ಕುಮಾರ್ ಜಿ.ಆರ್ ಮಾತಾನಾಡಿ, ತರಾತುರಿಯಲ್ಲಿ ಶಾಲೆಗಳನ್ನು ಪುನರಾರಂಭಿಸುವುದು ಬೇಡ. ಕೋವಿಡ್ ಹರುಡುವ ಭೀತಿ ಹಿನ್ನೆಲೆ ಸರ್ಕಾರ ಮಾಸ್ಕ್ ಧರಿಸುವುದು ಕೂಡ ಕಡ್ಡಾಯ ಮಾಡಿದೆ. ಹೀಗಿರುವಾಗ ಶಾಲೆ ಪುನರಾರಂಭಿಸದೆ ಇರುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿರ್ಧಾರದ ಬಗ್ಗೆ ಮತ್ತೊಬ್ಬರು ಪೋಷಕರು ನಂದಿತಾ ಪ್ರತಿಕ್ರಿಯಿಸಿ, ಶಾಲೆಗಳನ್ನ ಡಿಸೆಂಬರ್ನಲ್ಲಿ ಪುನರಾರಂಭ ಮಾಡಲು ಮುಂದಾಗಿದ್ದ ಸರ್ಕಾರ ಈಗ ನಿರ್ಧಾರ ಬದಲಾಯಿಸಿದೆ. ಡಿಸೆಂಬರ್ ಅಂತ್ಯದವರೆಗೆ ಶಾಲೆ ಪುನರಾರಂಭ ಮಾಡದಿರುವುದೇ ಒಳ್ಳೆಯದು. ಪೋಷಕರಾದ ನಮಗೆ ಮಕ್ಕಳನ್ನ ಕೋವಿಡ್ ಸಮಯದಲ್ಲಿ ಶಾಲೆಗೆ ಕಲಿಸಲು ಭಯವಾಗುತ್ತದೆ. ಆನ್ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಕೋವಿಡ್ ಲಸಿಕೆ ಬರುವವರೆಗೆ ಶಾಲೆ ಪುನರಾರಂಭ ಮಾಡದಿರುವುದು ಉತ್ತಮ ಎಂದಿದ್ದಾರೆ.