ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಕುಟುಂಬಸ್ಥರು ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಮುಂದೆ ಬಂದು ತಮ್ಮ ಮಕ್ಕಳನ್ನು ಬಿಟ್ಟು ಬಿಡುವಂತೆ ಗೋಗರೆಯುತ್ತಿದ್ದಾರೆ.
ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಗಲಭೆ ನಡೆದ ದಿನ ಮನೆಯಲ್ಲೇ ಇದ್ದರು. ಪೊಲೀಸರು ರಾತ್ರೋರಾತ್ರಿ ಬಂದು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಅವರ ಜೊತೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಮನೆಗೆ ಹೋಗಿ ಎಂದು ಹೇಳಿದರು ಕೇಳದೆ ಠಾಣೆಯ ಬಳಿಯೇ ಠಿಕಾಣಿ ಹೂಡಿದ್ದಾರೆ.
ಈಗಾಗಲೇ ಕೆಲ ಆರೋಪಿಗಳನ್ನು ಇಂದಿರಾನಗರ ಠಾಣೆಗೆ ಸ್ಥಳಾಂತರ ಮಾಡಲಾಗಿದೆ. ಕೆಲ ಪೋಷಕರಿಗೆ ಆರೋಪಿಗಳು ಬಂಧನವಾಗಿರುವ ಬಗ್ಗೆ ಮಾಹಿತಿ ಇಲ್ಲ. ಘಟನೆ ಬಳಿಕ ಕೆಲವರು ಮನೆಯಿಂದ ಕಣ್ಮರೆಯಾಗಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರಾ ಅಥವಾ ಇಲ್ಲವಾ ಅನ್ನುವುದರ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ, ಪೋಷಕರು ಆಧಾರ್ ಕಾರ್ಡ್, ಫೋಟೋ ಹಿಡಿದು ಠಾಣೆ ಬಳಿ ಜಮಾಯಿಸಿದ್ದಾರೆ.