ಬೆಂಗಳೂರು : ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದ ಅಲ್ಲಿನ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದು, ಅದರಲ್ಲೂ ಹೆಚ್ಚಾಗಿ ಕರ್ನಾಟಕದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಇತ್ತ ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರು ಭಾರತೀಯ ರಾಯಭಾರಿ ಕಚೇರಿ ಯಾವುದೇ ಸಹಾಯಕ್ಕೆ ಮುಂದಾಗಿಲ್ಲ ಎಂದು ದೂರಿಸಿದ್ದಾರೆ. ಕಚೇರಿ ವಿರುದ್ಧ ಮಾಧ್ಯಮಗಳ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಕುರುಬರಹಳ್ಳಿ ನಿವಾಸಿ ಪೂರ್ಣಿಮಾ ಎಂಬುವರ ಮಗಳು ರುಚಿರಾ ಅವರು, ಉಕ್ರೇನ್ನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳು ವಿಡಿಯೋ ಮಾಡಿ ಅಲ್ಲಿನ ಪರಿಸ್ಥಿತಿಯ ಕುರಿತಂತೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಕಾಲೇಜ್ ಕ್ಯಾಂಪಸ್ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ನಿನ್ನೆ ರಾತ್ರಿಯಿಂದ ಮಗಳ ಮೊಬೈಲ್ ಸ್ಚಿಚ್ ಆಫ್ ಆಗಿದೆ ಎಂದು ಪೋಷಕರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿನಿ ನವ್ಯಾ ಮಾತನಾಡಿದ್ದು, 'ನಿನ್ನೆಯವರೆಗೂ ಪರಿಸ್ಥಿತಿ ಸಹಜವಾಗಿತ್ತು. ಆದರೆ, ಬಾಂಬ್ ದಾಳಿ ಆರಂಭವಾದಗಿನಿಂದ ಎಲ್ಲರೂ ಭಯದಲ್ಲಿದ್ದಾರೆ. ನಾವೆಲ್ಲ ಸುರಕ್ಷಿತವಾಗಿದ್ದೇವೆ. ಆದರೂ ಬಾಂಬ್ಗಳ ದಾಳಿಯಿಂದ ವಿದ್ಯಾರ್ಥಿಗಳು, ಪೋಷಕರಲ್ಲಿ ಭಯ ಇದ್ದೇ ಇರುತ್ತದೆ.
ಆದಷ್ಟೂ ಬೇಗ ಭಾರತೀಯ ರಾಯಭಾರಿ ಕಚೇರಿಯಿಂದ ಕ್ರಮಕೈಗೊಂಡು, ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ಅವರ ತವರಿಗೆ ಮರಳಿಸುವಂತೆ ಮನವಿ ಮಾಡಿಕೊಂಡಿರುವ ವಿಡಿಯೋವನ್ನು ಪೋಷಕರು ಮಾಧ್ಯಮಗಳಿಗೆ ನೀಡಿದ್ದಾರೆ.
ಬಂಕರ್ವೊಂದರಲ್ಲಿ ಸಿಲುಕಿದ 45ಕ್ಕೂ ಅಧಿಕ ವಿದ್ಯಾರ್ಥಿಗಳು : ವಿದ್ಯಾರ್ಥಿನಿ ರುಚಿತಾ ಸೇರಿದಂತೆ ಸುಮಾರು 45ಕ್ಕೂ ಅಧಿಕ ವಿದ್ಯಾರ್ಥಿಗಳು ಉಕ್ರೇನ್ನ ಬಂಕರ್ವೊಂದರಲ್ಲಿ ತಂಗಿದ್ದಾರೆ. ಅಲ್ಲಿ ಮೂಲಸೌಕರ್ಯ ಸಮಸ್ಯೆ ಎದುರಾಗಿದ್ದು, ಊಟ,ತಿಂಡಿಗಾಗಿ ಪರದಾಡುತ್ತಿದ್ದಾರೆ. ರಾಯಭಾರಿ ಕಚೇರಿಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಯುದ್ದ ಹಾಗೂ ಸಮಸ್ಯೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯೇ ಇರಲಿಲ್ಲ ಎಂದು ತಿಳಿಸಿದ್ದಾರೆ.