ಬೆಂಗಳೂರು: ಜಮೀರ್ ನಿವಾಸದ ಮೇಲೆ ಯಾವ ಕಾರಣಕ್ಕೆ ಇಡಿ ದಾಳಿ ಆಗಿದೆಯೋ ಗೊತ್ತಿಲ್ಲ. ಅವರು ಯಾವ ಕಾರಣಕ್ಕೆ ಆಗಿದೆ ಅಂತ ಹೇಳಲಿಲ್ಲ. ಇವೆಲ್ಲವೂ ಕೂಡ ರಾಜಕೀಯ ಪ್ರೇರಿತ ದಾಳಿಗಳಾಗಿವೆ. ಇದೇನು ಹೊಸತಲ್ಲ, ಮುಂಚಿನಿಂದಲೂ ನಡೆಯುತ್ತಿದೆ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ.
ಇಂದು ಮಾಜಿ ಸಚಿವ ಜಮೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚಿಸಿದ ಜಿ. ಪರಮೇಶ್ವರ್, ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. ಬಂಗಲೆ ವಿಚಾರದಲ್ಲಿ ಇಡಿ ದಾಳಿ ಆಗಿರಲಿಕ್ಕಿಲ್ಲ. ಪಂಚನಾಮೆಯಲ್ಲಿ ಬಂಗಲೆ ವಿಚಾರದಲ್ಲಿ ದಾಳಿ ಆಗಿದೆ ಅಂತ ಎಲ್ಲೂ ಇಲ್ಲಾ ಎಂದೆನಿಸುತ್ತದೆ. ಪಂಚನಾಮೆಯಲ್ಲಿ ಆ ರೀತಿಯಲ್ಲಿ ಇದ್ದಂತೆ ಇಲ್ಲ. ಇಡಿ ಅವರು ಹೆಚ್ಚಿನ ಮಾಹಿತಿ ಬೇಕು ಅನ್ನಿಸಿದರೆ ಕರೆಸಿಕೊಳ್ಳುತ್ತಾರೆ ಎಂದರು.
ಜಮೀರ್ ನಮ್ಮ ಪಕ್ಷದ ಪ್ರಮುಖ ನಾಯಕರು. ಅವರ ಮನೆ ಮೇಲೆ ಐಟಿ ಇಡಿ ದಾಳಿ ನಡೆದಿತ್ತು. ಹಾಗಾಗಿ ಇಂದು ಅವರನ್ನ ಮಾತನಾಡಿಸೋಣ ಅಂತ ಬಂದಿದ್ದೆ. ಭೇಟಿ ಮಾಡಿ ಇಬ್ಬರು ಮಾತುಕತೆ ನಡೆಸಿದ್ದೇವೆ. ಇದೊಂದು ಸೌಜನ್ಯದ ಭೇಟಿ ಅಷ್ಟೇ. ಐಟಿ, ಇಡಿ ದಾಳಿ ಯಾವ ಕಾರಣಕ್ಕೆ ಆಗಿದೆಯೋ ಗೊತ್ತಿಲ್ಲ. ಅವರು ಯಾವ ಕಾರಣಕ್ಕೆ ಆಗಿದೆ ಅಂತ ಹೇಳಲಿಲ್ಲ. ಸದ್ಯಕ್ಕೆ ಯಾವುದೇ ನೋಟಿಸ್ ಕೂಡ ಬಂದಿಲ್ಲ. ನೋಟಿಸ್ ಕೊಟ್ರೆ ವಿಚಾರಣೆಗೆ ಹೋಗಬೇಕು ಅದು ಸ್ವಾಭಾವಿಕ ಎಂದು ಹೇಳಿದರು.
ಅಧಿಕಾರಕ್ಕೆ ಬಂದ್ಮೇಲೆ ಹೈಕಮಾಂಡ್ ನಿರ್ಧಾರ:
ನೀವು ಸಿಎಂ ಆಕಾಂಕ್ಷಿ ಅಲ್ವಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಅನ್ನೋ ಸಂಸ್ಕೃತಿ ಇಲ್ಲ. ಅಧಿಕಾರಕ್ಕೆ ಬಂದ್ಮೇಲೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಕಾಂಗ್ರೆಸ್ ಪಕ್ಷ ಮೊದಲು ಅಧಿಕಾರಕ್ಕೆ ಬರಲಿ, ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರು ಅನ್ನೋದು ನಿರ್ಧಾರ ಆಗಲಿದೆ. ಈಗ ಅಂಥ ಯಾವುದೇ ಪ್ರಶ್ನೆಗಳು ಉದ್ಭವಿಸಲ್ಲ ಎಂದು ತಿಳಿಸಿದರು.
ಹೆಸರು ಬದಲಾವಣೆ ಸರಿಯಲ್ಲ:
ನಾನು ಎಲ್ಲೂ ದೂರ ಆಗಿಲ್ಲ, ನಾನು ತುಮಕೂರಿನಲ್ಲಿ ಇದ್ದೇನೆ. ನಮ್ಮ ಆಸ್ಪತ್ರೆ ಕೆಲಸ ಇದೆ. ಬೆಂಗಳೂರಿನಲ್ಲಿ ಪಕ್ಷದ ಕೆಲಸ ಇದ್ದರೆ ಬರುತ್ತೇನೆ ಎಂದ ಅವರು, ಕಾಂಗ್ರೆಸ್ ನಾಯಕರ ಹೆಸರು ಬದಲಾವಣೆ ಮಾಡುತ್ತಿರುವ ಸರ್ಕಾರದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಹಿಂದೆ ಹಲವಾರು ಮಹನೀಯರು ದೇಶಕ್ಕೆ ಕೊಡುಗೆ ನೀಡಿದ್ದಾರೆ.
ಅವರು ಹೆಸರುಗಳನ್ನು ಬಿಲ್ಡಿಂಗ್ಗೆ, ರಸ್ತೆಗೆ, ಯೋಜನೆಗೆ ಇಟ್ಟಿದ್ದೇವೆ. ಅದನ್ನ ಬದಲಾವಣೆ ಮಾಡುವುದು ಸರಿ ಕಾಣುವುದಿಲ್ಲ. ಮುಂದೆ ಬರುವವರು ಇವರು ಇಡುವ ಹೆಸರನ್ನು ಬದಲಾವಣೆ ಮಾಡುತ್ತಾರೆ. ಗಾಂಧಿ, ನೆಹರು ಬಗ್ಗೆ ಮಾತಾಡುವುದು ಸರಿ ಕಾಣುವುದಿಲ್ಲ. ನೆಹರು ಅವರು ಅಭಿವೃದ್ಧಿ ಪಥದಲ್ಲಿ ಅಡಿಪಾಯ ಹಾಕಿದ್ರು, ಅದು ಎಲ್ಲರಿಗೂ ಗೊತ್ತಿದೆ.
ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟಿಲ್ಲ ಅಂತ ಹೇಳಲು ಹೊರಟಿದ್ದಾರೆ. ಮೊನ್ನೆ ಒಂದು ವಿಡಿಯೋ ನೋಡಿದೆ ಅದರಲ್ಲಿ ಸ್ವಾತಂತ್ರ್ಯ ತಂದು ಕೊಟ್ಟಿರುವುದು ಸ್ವಾಮೀಜಿಯವರು, ಗಾಂಧಿ-ನೆಹರು ಅಲ್ಲ ಅಂತ ಹೇಳ್ತಾರೆ. ಇಂಥವರಿಗೆ ಏನ್ ಹೇಳುವುದು ಎಂದರು.