ಬೆಂಗಳೂರು: ರೌಡಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ನಗರ ವಿಭಾಗದ ಸುಮಾರು 300ಕ್ಕಿಂತ ಹೆಚ್ಚು ರೌಡಿಗಳಿಗೆ ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.
ಮೈಸೂರು ರಸ್ತೆಯಲ್ಲಿರುವ ಕೇಂದ್ರ ಸಶಸ್ತ್ರ ಪಡೆ ಕವಾಯತು ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದರು. ಗುಂಪು ಕಟ್ಟಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಿಯಲ್ ಎಸ್ಟೇಟ್ ವ್ಯವಹಾರ, ಮೀಟರ್ ಬಡ್ಡಿ ಹಾಗೂ ಹಫ್ತಾ ವಸೂಲಿ ಮಾಡುವುದನ್ನು ಮುಂದುವರೆಸಿದರೆ ಸರಿ ಇರುವುದಿಲ್ಲ. ನಿಮ್ಮ ಮೇಲಿರುವ ಕೇಸ್ಗಳನ್ನು ಬಗೆಹರಿಸಿಕೊಳ್ಳಿ. ಕಾಲ ಕಾಲಕ್ಕೆ ನ್ಯಾಯಾಲಯ ಹಾಗೂ ಠಾಣೆಗೆ ಹಾಜರಾಗಿ ಎಂದು ಖಡಕ್ ವಾರ್ನಿಂಗ್ ನೀಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದೀಪ್ ಪಾಟೀಲ್, ನಗರದಲ್ಲಿ ಡ್ರಗ್ಸ್ ಹಾವಳಿ ಹಾಗೂ ರೌಡಿಸಂ ನಿಯಂತ್ರಣ ನಮ್ಮ ಮೊದಲ ಆದ್ಯತೆ. ಕಳೆದ ವಾರ ನಗರದಲ್ಲಿ ಮೂರು ಗಾಂಜಾ ಕೇಸ್ ದಾಖಲಾಗಿದೆ. ಐದು ಕ್ಲಬ್ ಹಾಗೂ ಪಬ್ಗಳ ಮೇಲೆ ದಾಳಿ ನಡೆಸಿದ್ದೇವೆ.
ಎರಡನೇಯದಾಗಿ ರೌಡಿ ಚಟುವಟಿಕೆ ನಡೆಸುತ್ತಿದ್ದ ರೌಡಿಗಳಿಗೆ ಅಪರಾಧ ಎಸಗದಂತೆ ಎಚ್ಚರಿಕೆ ಕೊಡಲಾಗಿದೆ. ಪರೇಡ್ ಇಂದು ಮಾತ್ರ ಸೀಮಿತವಲ್ಲ. ನಿರಂತರವಾಗಿ ಪರೇಡ್ ನಡೆಸಲಾಗುವುದು ಎಂದರು.