ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಒಂದಿಬ್ಬರ ಮಾತು ಕೇಳಿ ಮಾಡಲಾಗುತ್ತಿದ್ದು, ಇದು ರಾಜಕೀಯ ಪ್ರೇರಿತವಾಗಿದೆ ಎಂದು ಪಂಚಮಸಾಲಿ ಸಮುದಾಯದ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಪಂಚಮಸಾಲಿ ಸಮಯದಾಯದ ಸಚಿವರು, ಶಾಸಕರ ಜೊತೆಗೂಡಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಜಯಮೃತ್ಯುಂಜಯ ಸ್ವಾಮೀಜಿಗಳು ಪಾದಯಾತ್ರೆ ಮಾಡಿ ಲಕ್ಷಾಂತರ ಜನರನ್ನು ಒಗ್ಗೂಡಿಸಿ ಶಕ್ತಿಪ್ರದರ್ಶನ ಮಾಡಿದ್ದೇವೆ. ಆದರೆ ಕೆಲವು ವ್ಯಕ್ತಿಗಳು ಸ್ವಾರ್ಥಕ್ಕಾಗಿ ಸಮುದಾಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. 2ಎ ಗೆ ಸೇರಿಸಬೇಕು ಅನ್ನೋದು ಸಮಾವೇಶದ ಮುಖ್ಯ ಉದ್ದೇಶ ಆಗಿತ್ತು. ಆದರೆ ಅದನ್ನು ಕೆಲವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಸವ ಮೃತ್ಯುಂಜಯ ಸ್ವಾಮೀಜಿಗಳು ಯತ್ನಾಳ್ ಮತ್ತು ಕಾಶಪ್ಪನವರ್ ಅವರ ಕಪಿಮುಷ್ಟಿಯಲ್ಲಿದ್ದಾರೆ. ಸ್ವಾರ್ಥ ಸಾಧನೆಗಾಗಿ ಸಮಾವೇಶ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.
ಬೂಟಾಟಿಕೆ ಮಾತಿನಿಂದ ಪ್ರಯೋಜನವಿಲ್ಲ:
ಬೂಟಾಟಿಕೆ ಮಾತನಾಡೋದ್ರಿಂದ ಏನೂ ಪ್ರಯೋಜನ ಆಗಲ್ಲ. ತಾನೇ ಪಂಚಮಸಾಲಿ ಸಮುದಾಯದ ಅಧ್ಯಕ್ಷ ಅಂತಾ ವಿಜಯಾನಂದ ಕಾಶಪ್ಪನವರ್ ಘೋಷಿಸಿಕೊಂಡಿದ್ದಾರೆ. ಇದು ಕಾನೂನು ಬಾಹಿರ, ಸ್ವಾಮೀಜಿಗಳಿಗೂ ಆ ರೀತಿ ಘೋಷಿಸೋ ಅಧಿಕಾರವಿಲ್ಲ. ಪಂಚಮಸಾಲಿ ಬೇಡಿಕೆಯನ್ನು ಹಿಂದುಳಿದ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ. ಇದಕ್ಕಾಗಿ ಸಿಎಂಗೆ ಕೃತಜ್ಞತೆ ಸಲ್ಲಿಸ್ತೇವೆ. ಸದುದ್ದೇಶದಿಂದ ಆರಂಭಗೊಂಡಿದ್ದ ಮೀಸಲಾತಿ ಹೋರಾಟ ಅದೇ ಉದ್ದೇಶದಿಂದ ಅಂತ್ಯವಾಗಿಲ್ಲ ಎಂದು ಸಚಿವರು ಆರೋಪಿಸಿದರು.
ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವುದು ಸರಿಯಲ್ಲ. ನಾವೆಲ್ಲರೂ ಸಮಾಜದ ಋಣವನ್ನು ತಿಂದು ಬದುಕಿದ್ದೇವೆ. ಯಡಿಯೂರಪ್ಪ 3 ಬಿಗೆ ಪಂಚಮಸಾಲಿ ಸಮುದಾಯವನ್ನು ಸೇರಿಸಿದರು. ಅದನ್ನು ನಮ್ಮ ಸಮಾಜ ಮರೆತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯತ್ನಾಳ್ ಕಾಂಗ್ರೆಸ್ 'ಬಿ' ಟೀಂ:
ಇದೇ ವೇಳೆ ಬಸನಗೌಡ ಯತ್ನಾಳ್ ಕಾಂಗ್ರೆಸ್ 'ಬಿ' ಟೀಂ ಆಗಿ ವರ್ತಿಸುತ್ತಿದ್ದಾರೆ ಎಂದು ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದರು. ನೀವು ಶಾಸಕರಾಗಲು ಯಡಿಯೂರಪ್ಪ ಹಾಗೂ ಸಂಘದ ಪ್ರಮುಖರು ಕಾರಣರು. ಮೊದಲು ನೀನು ರಾಜೀನಾಮೆ ಕೊಟ್ಟು ಆಚೆ ಹೋಗಿ, ಮತ್ತೆ ಜನರಿಂದ ಆರಿಸಿ ಬನ್ನಿ ಎಂದು ಯತ್ನಾಳ್ಗೆ ನಿರಾಣಿ ಸವಾಲು ಹಾಕಿದರು.
ಸಮಯ ಕೊಡುವುದು ಸರಿಯಲ್ಲ:
ಮೀಸಲಾತಿಗೆ ಸ್ವಲ್ಪ ಕಾಲಾವಕಾಶ ಸರ್ಕಾರಕ್ಕೆ ಕೊಡಬೇಕು. ಉಪವಾಸ ಸತ್ಯಾಗ್ರಹವನ್ನ ನಮ್ಮ ಸ್ವಾಮೀಜಿಗಳು ಬಿಡಬೇಕು. ಸರ್ಕಾರ ಅವರ ಜೊತೆ ಮಾತುಕತೆಗೆ ಸಿದ್ಧವಿದೆ. ಸ್ವಾಮೀಜಿಗಳು ಯಾರೋ ಒಂದಿಬ್ಬರ ಮಾತು ಕೇಳಬಾರದು. ಎಲ್ಲರ ಸಲಹೆ ಪಡೆದುಕೊಳ್ಳಬೇಕು. ಕೇವಲ ಪಂಚಮಸಾಲಿಗೆ ಮಾತ್ರವಲ್ಲ, ಸಮಸ್ತ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ ಸಚಿವ ನಿರಾಣಿ, ಯತ್ನಾಳ್ ಹಾಗೂ ವಿಜಯಾನಂದ ತಾಳಕ್ಕೆ ಸ್ವಾಮೀಜಿಗಳು ಕುಣಿಯಬಾರದು. ಒಂದೆ ರಾತ್ರಿಯಲ್ಲಿ ಮೀಸಲಾತಿ ಕೊಡುವಂತದ್ದಲ್ಲ. ಹಂತ - ಹಂತವಾಗಿ ಬರಬೇಕು. ಯೋಚನೆ ಮಾಡದೇ ಸತ್ಯಾಗ್ರಹ ಮಾಡುತ್ತೇನೆ ಅನ್ನೋದು ಸರಿಯಲ್ಲ. ಇದು ಸಂಪೂರ್ಣ ರಾಜಕೀಯ ಆಗುತ್ತೆ. ವಿಜಯಾನಂದ ಕಾಶಪ್ಪನವರ್ ಮೈಮೇಲೆ ಜ್ಞಾನ ಇಟ್ಟುಕೊಂಡು ಮಾತಾಡಬೇಕು. ಮೂರು ತಿಂಗಳು ಕಾಯಿರಿ, ರಿಪೋರ್ಟ್ ಬರುತ್ತದೆ ಎಂದರು.
ಕಾಶಪ್ಪನವರ್ ವಿರುದ್ಧ ನಿರಾಣಿ ಗುಡುಗು:
ಪಂಚಾಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ಎಂದು ಕಾಶಪ್ಪನವರ್ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ವಿಜಯಾನಂದ ಕಾಶಪ್ಪನವರ್ ಮಂಡಲ್ ಅಧ್ಯಕ್ಷ ಆಗುವುುದಕ್ಕೂ ಯೋಗ್ಯರಲ್ಲ. ನಿನ್ನೆ ನಡೆದ ಸಮಾವೇಶ ಸಂಪೂರ್ಣ ಕಾಂಗ್ರೆಸ್ ಸಮಾವೇಶದಂತೆ ಇತ್ತು. ನಾವು 15 ಜನ ಶಾಸಕರಿದ್ದೇವೆ, ನಮ್ಮ ಅಭಿಪ್ರಾಯ ಕೇಳದೇ ತೀರ್ಮಾನ ಮಾಡಿದ್ದಾರೆ. ಅಧ್ಯಕ್ಷರು, ಪದಾಧಿಕಾರಿಗಳು ಯಾವುದೇ ಪಕ್ಷದವರು ಆಗಿರಬಾರದು. ರಾಜಕೀಯದಿಂದ ದೂರ ಇರೋರು ಸಮುದಾಯದ ಅಧ್ಯಕ್ಷರಾಗಬೇಕು. ಸಿಎಂಗೆ ಜಯಮೃತ್ಯುಂಜಯ ಸ್ವಾಮೀಜಿಗಳು ಕಾಲಾವಕಾಶ ಕೊಡಬೇಕು ಎಂದು ಸಚಿವ ನಿರಾಣಿ ಆಗ್ರಹಿಸಿದರು.
ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ:
ವಿವಿಧ ಮೀಸಲಾತಿ ಬೇಡಿಕೆ ಸಂಬಂಧ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಕಮಿಟಿ ರಚನೆ ಮಾಡಲು ನಿರ್ಧರಿಸಲಾಗಿದೆ. ಹಿಂದುಳಿದ ಆಯೋಗದಿಂದ ಮೊದಲು ವರದಿ ಬರಬೇಕು. ವರದಿ ಬಂದ ನಂತರ ಕಮಿಟಿ ರಚನೆ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಸಿಸಿ ಪಾಟೀಲ್ ತಿಳಿಸಿದರು.