ಬೆಂಗಳೂರು : ಗ್ಯಾರಂಟಿಗಳು ನಮ್ಮನ್ನು ಮಕಾಡೆ ಮಲಗಿಸಿವೆ ಎಂಬ ಹೇಳಿಕೆಯಿಂದ ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಯೂ ಟರ್ನ್ ಹೊಡೆದಿದ್ದಾರೆ. ಗಾಂಧೀಜಿ ತಿಪಟೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ ಹೋಗಿದ್ದರು. ಆ ಸ್ಥಳವನ್ನು ಅಭಿವೃದ್ಧಿ ಮಾಡುವ ಬಗ್ಗೆ ಚರ್ಚೆಯಾಯಿತು. ಈ ಸಂದರ್ಭದಲ್ಲಿ ಅಭಿವೃದ್ಧಿ ಬಗ್ಗೆ ಜನ ನನ್ನಲ್ಲಿ ಪ್ರಸ್ತಾಪಿಸಿದರು. ಅದಕ್ಕೆ ನಾನು, ಐದು ಗ್ಯಾರಂಟಿಗಳಿಂದ ಮಲಗಿಕೊಳ್ಳುವ ರೀತಿ ಮಾಡುವೆ ಅಂತ ಹೇಳಿದ್ದೆ ಅಷ್ಟೇ. ಐದು ಗ್ಯಾರಂಟಿಗಳು ನಮ್ಮನ್ನು ಮಲಗಿಸಿಲ್ಲ, ಎಚ್ಚರದಿಂದ ಇದ್ದೇವೆ ಎಂದು ತಿಳಿಸಿದರು.
ಯಾವ ಅಸಮಾಧಾನವೂ ಇಲ್ಲ, ಅನುದಾನವೂ ಬಿಡುಗಡೆ ಆಗ್ತಿದೆ. ನಾನು ತೃಪ್ತನಾಗಿದ್ದೇನೆ. ಸಿಎಂ ಜೊತೆಗೂ ಚೆನ್ನಾಗಿದ್ದೇನೆ. ಎಂತೆಂಥ ಸಂದರ್ಭದಲ್ಲೂ ನಾನು ಅಸಮಾಧಾನ ಹೊರ ಹಾಕಿಲ್ಲ. ಈಗೇಕೆ ಅಸಮಾಧಾನಗೊಳ್ಳಲಲಿ. ಯಾವುದೇ ಆಕಾಂಕ್ಷೆಯೂ ಇಲ್ಲ. ನಮ್ಮಲ್ಲಿ ರೆಬೆಲ್ಲೇ ಇಲ್ಲ. ಪ್ರತ್ಯೇಕ ಟೀಂ ಎಲ್ಲಿಂದ ಬರುತ್ತೆ?. ಅನುದಾನ ಕೇಳಬೇಕಾಗಿರುವುದು ನಮ್ಮ ಹಕ್ಕು. ಸುಮ್ಮನಿದ್ದರೆ ಆಗುತ್ತಾ?. ಅದನ್ನು ತಪ್ಪು ಅಂಥ ಹೇಳುವುದಕ್ಕೆ ಆಗುತ್ತಾ?. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದರು.
ಕೊಬ್ಬರಿಗೆ ಬೆಂಬಲ ಬೆಲೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕೊಬ್ಬರಿಗೆ ಬೆಂಬಲ ಬೆಲೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲ. ನಮ್ಮ 25 ಜನ ಸಂಸದರು ಚಕಾರ ಎತ್ತುತ್ತಿಲ್ಲ. ಅದಕ್ಕೆ ನಾನು ಹೊಣೆನಾ?. ಸಂಸದರು ಕೊಬ್ಬರಿ ಬೆಲೆ ಏರಿಕೆ ಬಗ್ಗೆ ಕೇಂದ್ರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.
ತಿಪಟೂರನ್ನು ಜಿಲ್ಲೆಯನ್ನಾಗಿ ಮಾಡುವ ಬೇಡಿಕೆ ಬಗ್ಗೆ ಮಾತನಾಡಿ, ತಿಪಟೂರು ಜಿಲ್ಲಾ ಕೇಂದ್ರವಾಗಲೂ ಎಲ್ಲಾ ರೀತಿಯಲ್ಲೂ ಅರ್ಹವಾಗಿದೆ. ಮೂಲಸೌಕರ್ಯ ಕಲ್ಪಿಸಿ ಕೊಟ್ಟಿದ್ದೇನೆ. ಎಲ್ಲಾ ಇಲಾಖೆಯ ಉಪವಿಭಾಗ ಕಚೇರಿಗಳೂ ಇವೆ. ಸಚಿವ ರಾಜಣ್ಣ ಮಧುಗಿರಿ ಜಿಲ್ಲಾ ಕೇಂದ್ರ ಮಾಡಿ ಅಂತಿದ್ದಾರೆ. ನಾನು ತಿಪಟೂರು ಜಿಲ್ಲಾ ಕೇಂದ್ರ ಮಾಡಿ ಅಂತ ಹೇಳಿದ್ದೇನೆ. ಸಿಎಂ ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಂತಿಮವಾಗಿ ಸಿಎಂ ತೀರ್ಮಾನಕ್ಕೆ ನಾವು ಬದ್ಧ ಎಂದರು.
ಆದರೆ ಸುದ್ದಿಗೋಷ್ಠಿ ಮುಗಿಸಿ ತೆರಳುವಾಗ ನನ್ನ ನೋಡಿದ್ರೆ ಸಂತೃಪ್ತಿಯಾಗಿ ಇರುವ ತರಹ ಕಾಣ್ತೀನಾ? ಎಂದು ಮತ್ತೆ ಗೊಂದಲದ ಹೇಳಿಕೆ ನೀಡಿದರು. ಮಾಧ್ಯಮಗಳ ಮೈಕ್ಗಳ ಮುಂದೆ ಕೂತಾಗ ಸಂತೃಪ್ತಿಯಾಗಿದ್ದೇನೆ ಎಂದಿದ್ದ ಕೈ ಶಾಸಕ ಷಡಕ್ಷರಿ, ಆಸನದಿಂದ ಎದ್ದು ಹೋಗುವಾಗ ನಾನು ಸಂತೃಪ್ತಿಯಾಗಿ ಇರೋ ತರಹ ಕಾಣುತ್ತಿದ್ದೇನಾ ಎಂದು ಹೇಳುತ್ತಾ ತೆರಳಿದರು. ಆ ಮೂಲಕ ತಮ್ಮೊಳಗಿನ ಅಸಮಾಧಾನ ಮಾಧ್ಯಮದ ಮುಂದೆ ಪರೋಕ್ಷವಾಗಿ ಹೊರಹಾಕಿದರಾ? ಎಂಬ ಅನುಮಾನ ಮೂಡಿತು.
ಸಹಕಾರ ಸಪ್ತಾಹ: ನ. 14ರಿಂದ ನ. 20ರವರೆಗೆ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ವಿಜೃಂಭಣೆಯಿಂದ ಸಹಕಾರ ಸಪ್ತಾಹ ಮಾಡುತ್ತೇವೆ ಎಂದು ಹೇಳಲ್ಲ. ಅದರ ಧ್ಯೇಯೋದ್ದೇಶಕ್ಕನುಗುಣವಾಗಿ ಕಾರ್ಯಕ್ರಮ ನೆರವೇರಿಸಲಿದ್ದೇವೆ. ಸಹಕಾರಿಗಳು ಸಲಹೆ ನೀಡಿದ್ದಾರೆ. ಏಳು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಸಹಕಾರಿ ಮಹಾಮಂಡಲದ ಅಧ್ಯಕ್ಷರು ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.
ಇದೇ ವೇಳೆ ಮಾತನಾಡಿದ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ, ರಾಜ್ಯಮಟ್ಟ, ಜಿಲ್ಲಾ ಮಟ್ಟ, ಗ್ರಾಮ ಮಟ್ಟದಲ್ಲಿ ಸಹಕಾರ ಸಪ್ತಾಹ ಆಚರಣೆ ಮಾಡಲಾಗುವುದು. ರಾಜ್ಯದ 4 ಕಂದಾಯ ವಿಭಾಗದ ಪ್ರತಿ ವಿಭಾಗಕ್ಕೆ ಒಬ್ಬ ಸಹಕಾರಿ ಗಣ್ಯರಿಗೆ ಮತ್ತು ಬೆಂಗಳೂರು ನಗರ ಪ್ರದೇಶಕ್ಕೆ ಒಬ್ಬರು ಸಹಕಾರಿ ಗಣ್ಯರಿಗೆ ಹಾಗೂ ಸಹಕಾರ ಇಲಾಖೆಯಲ್ಲಿ ದಕ್ಷತೆ ಹಾಗೂ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ಒಬ್ಬ ಅಧಿಕಾರಿಗೆ ಸೇರಿದಂತೆ ಒಟ್ಟು 6 ಸಹಕಾರ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಸಹಕಾರ ಬ್ಯಾಂಕ್ಗಳಲ್ಲಿನ ಅವ್ಯವಹಾರ, ವಂಚನೆ ಸಂಬಂಧ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಇನ್ನು 15-30 ದಿನಗಳಲ್ಲಿ ವರದಿ ಸಲ್ಲಿಕೆ ಮಾಡಲಿದ್ದಾರೆ. ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಠೇವಣಿದಾರರ ರಕ್ಷಣೆಗೂ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಚಿವ ಕೆ. ಎನ್.ರಾಜಣ್ಣ ತಿಳಿಸಿದರು.
ಇದನ್ನೂ ಓದಿ : ಸಿದ್ದರಾಮಯ್ಯ ಸರ್ಕಾರದ 'ಶತಕ'ದಾಟ: ಗ್ಯಾರಂಟಿಗಳ ಜಾರಿಗೆ ಪಂಚ ಸವಾಲು