ಬೆಂಗಳೂರು: ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಪದ್ಮನಾಭನಗರ ಕ್ಷೇತ್ರವೂ ಒಂದು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಸಚಿವ ಆರ್. ಅಶೋಕ್ ಕಣದಲ್ಲಿದ್ದು, ಅವರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿವೆ. ಹಿಂದೆ ಅತಿ ದೊಡ್ಡ ಕ್ಷೇತ್ರವಾಗಿದ್ದ ಉತ್ತರಹಳ್ಳಿ ಕ್ಷೇತ್ರಕ್ಕೆ ಪದ್ಮನಾಭನಗರ ಒಳಪಟ್ಟಿತ್ತು. 2008 ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಾದ ನಂತರ ಹೊಸದಾಗಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಉತ್ತರಹಳ್ಳಿ ಕ್ಷೇತ್ರದಲ್ಲೂ ಗೆದ್ದಿದ್ದ ಆರ್. ಅಶೋಕ್ ಅವರು, ಪದ್ಮನಾಭನಗರ ಕ್ಷೇತ್ರವಾದ ನಂತರ ಸತತ ಗೆಲುವು ಸಾಧಿಸುತ್ತಿದ್ದರು. ಇದೀಗ ಏಳನೇ ಬಾರಿ ಪದ್ಮನಾಭನಗರದಿಂದಲೇ ಅದೃಷ್ಟ ಪರೀಕ್ಷೆಗೆ ಅವರು ಮುಂದಾಗಿದ್ದಾರೆ. ಅದರ ಜೊತೆಗೆ ಹೈಕಮಾಂಡ್ ನಿರ್ದೇಶನದ ಮೇರೆಗೆ ಕನಕಪುರದಲ್ಲೂ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಈ ಬಾರಿ ಎರಡೂ ಕಡೆ ಸ್ಪರ್ಧೆ ಮಾಡಿರುವುದರಿಂದ ಅಶೋಕ್ ಅವರಿಗೆ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ.
ಬಿಜೆಪಿ ಭದ್ರಕೋಟೆಯಾಗಿರುವ ಪದ್ಮನಾಭನಗರದಲ್ಲಿ ಜಯಸಾಧಿಸುವುದು ಇತರ ಪಕ್ಷಗಳಿಗೆ ಅಷ್ಟು ಸುಲಭದ ಮಾತಲ್ಲ. ಆದರೂ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿ ಭದ್ರಕೋಟೆಯನ್ನು ಕೆಡವಲು ತಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಕಾಂಗ್ರೆಸ್ನಿಂದ ವಿ.ರಘುನಾಥ ನಾಯ್ಡು, ಜೆಡಿಎಸ್ನಿಂದ ಮಂಜುನಾಥ್, ಪಕ್ಷೇತರರಾಗಿ ರಾಜ್ ಕಟ್ಟೆ ಮಂಜುನಾಥ್, ಅಮ್ ಆದ್ಮಿ ಪಕ್ಷದಿಂದ ಅಜಯ್ ಮಾಯಣ್ಣಗೌಡ ಸೇರಿದಂತೆ ಇತರ ಪಕ್ಷಗಳಿಂದ 13 ಮಂದಿ ಕಣದಲ್ಲಿದ್ದಾರೆ. ಕ್ಷೇತ್ರದ ಮತದಾರರ ಪ್ರಕಾರ, ಪದ್ಮನಾಭನಗರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ರೋಡ್ ಶೋ, ಮನೆ ಮನೆಗೆ ತೆರಳಿ ಆಯಾ ಪಕ್ಷಗಳ ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದಾರೆ.
ಒಟ್ಟು ಮತದಾರರು: ಪದ್ಮನಾಭನಗರ ಕ್ಷೇತ್ರದಲ್ಲಿ ಒಟ್ಟು ಮತದಾರರು ಅಂದಾಜು 2,78,219 ಮಂದಿ ಇದ್ದು, ಇದರಲ್ಲಿ ಪುರುಷ ಮತದಾರರು 1,42,867, ಮಹಿಳಾ ಮತದಾರರು 1,35,338 ಹಾಗೂ ಇತರ 14 ಮಂದಿ ಇದ್ದಾರೆ.
2008, 2013 ಹಾಗೂ 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರ್. ಅಶೋಕ್ ಅವರು ಗೆಲುವು ಸಾಧಿಸಿದ್ದರು. ಈಗ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಗುತ್ತಿಗೆದಾರರಾಗಿರುವ ವಿ.ರಘುನಾಥ ನಾಯ್ಡು ಅವರಿಗೆ ಟಿಕೆಟ್ ನೀಡಲಾಗಿದೆ. ಕನಕಪುರಿಂದ ಅಶೋಕ್ ಅವರನ್ನು ಕಣಕ್ಕಿಳಿಸಿದ ಬೆನ್ನಲ್ಲೇ ಪದ್ಮನಾಭನಗರದಿಂದ ಸಂಸದ ಡಿ.ಕೆ.ಸುರೇಶ್ ಅವರು ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬಂದಿದ್ದವು. ಆದರೆ, ಕೊನೆ ಗಳಿಗೆಯಲ್ಲಿ ರಘುನಾಥ ನಾಯ್ಡು ಅವರು ನಾಮಪತ್ರ ಸಲ್ಲಿಸಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಆದರೆ, ಕಳೆದ ಆರು ಬಾರಿ ಸತತವಾಗಿ ಆರ್. ಅಶೋಕ್ ಕ್ಷೇತ್ರದಲ್ಲಿ ಗೆಲುವಿನ ನಾಗಾಲೋಟ ಇದೆ. ಕಳೆದ ಬಾರಿಯ ಚುನಾವಣೆಯಲ್ಲಿ ಆರ್. ಅಶೋಕ್ ಅವರು 77,868 ಮತಗಳನ್ನು ಗಳಿಸಿ ಭರ್ಜರಿ ಗೆಲವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ವಿ.ಕೆ.ಗೋಪಾಲ್ 45,702 ಮತಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ 33,400 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಅಶೋಕ್ ಅವರು 32,166 ಮತಗಳ ಅಂತರಿಂದ ಗೆಲವು ಕಂಡಿದ್ದರು.
ಈಡೇರದ ಬೇಡಿಕೆಗಳು: ಮೇಲ್ವರ್ಗ, ಮಧ್ಯಮ ಹಾಗೂ ಕೆಳವರ್ಗ ಸೇರಿದಂತೆ ಎಲ್ಲಾ ವರ್ಗದವರು ನೆಲೆಸಿರುವ ಪದ್ಮನಾಭನಗರ ಕ್ಷೇತ್ರದಲ್ಲಿ ಸಮಸ್ಯೆಗಳೂ ಬಹಳಷ್ಟಿವೆ. ಸರ್ಕಾರಿ ಶಾಲೆಗಳು, ದೊಡ್ಡ ಸರ್ಕಾರಿ ಆಸ್ಪತ್ರೆ, ಆಟದ ಮೈದಾನ, ಸ್ಮಶಾನ ಇಲ್ಲ. ಇನ್ನು ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಳಚರಂಡಿ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ಸ್ಥಳೀಯರು. ಕ್ಷೇತ್ರದಲ್ಲಿ ಕೊಳಗೇರಿ ಹಾಗೂ ಬಡವರ್ಗದ ಜನರು ಅತಿ ಹೆಚ್ಚಿರುವ ಕ್ಷೇತ್ರದಲ್ಲಿ ಮಹಾನಗರ ಪಾಲಿಕೆಯ ಒಂದು ಶಾಲೆ ಮಾತ್ರ ಇದೆ. ಶಾಲಾ ಕಾಲೇಜುಗಳ ಸ್ಥಾಪನೆ ಹಲವು ಬೇಡಿಕೆಗಳು ಶಾಸಕರ ಮಟ್ಟದಲ್ಲಿ ಈಡೇರಿಲ್ಲ. ಕ್ಷೇತ್ರದಲ್ಲಿ ಏಕೈಕ ಹೆರಿಗೆ ಆಸ್ಪತ್ರೆ ಹೊರತುಪಡಿಸಿದರೆ ಬೇರೆ ಸರ್ಕಾರಿ ಆಸ್ಪತ್ರೆಗಳಿಲ್ಲ ಎಂಬುದು ಮತ್ತೊಂದು ಪ್ರಮುಖ ಕೊರತೆಯಾಗಿದೆ. ಹಲವು ಸಮಸ್ಯೆಗಳನ್ನು ಹೊಂದಿದ್ದರೂ ದೊಡ್ಡ ಮಟ್ಟಿನ ಸಮಸ್ಯೆಗಳಿಲ್ಲ ಎಂಬುದು ಕೆಲವರ ಅಭಿಪ್ರಾಯ. ಒಕ್ಕಲಿಗರು, ಬ್ರಾಹ್ಮಣರು, ನಾಯ್ಡು, ಮುಸ್ಲಿಂ, ಹಿಂದುಳಿದ ವರ್ಗ ಅತಿ ಹೆಚ್ಚು ಮತದಾರರಿದ್ದಾರೆ.
ಪದ್ಮನಾಭನಗರ ಕ್ಷೇತ್ರದಲ್ಲಿ ಒಕ್ಕಲಿಗರು, ಬ್ರಾಹ್ಮಣರು, ನಾಯ್ಡು ಸಮುದಾಯದವರು ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಂದೇ ಹೆಸರಿನ ಪ್ರಸಿದ್ಧ ಲಕ್ಷ್ಮಿಕಾಂತ ದೇವಾಲಯ ಹಾಗೂ ಉದ್ಯಾನವನವಿದೆ. ವಿಶೇಷವೆಂದರೆ ಲಕ್ಷ್ಮಿಕಾಂತ ಉದ್ಯಾನದಲ್ಲಿ ಔಷಧದ ಗಿಡಗಳಿವೆ. ಈ ಕ್ಷೇತ್ರವು ನಗರದ ಪ್ರಮುಖ ಬಡಾವಣೆಗಳಾದ ಪದ್ಮನಾಭನಗರ, ಕುಮಾರಸ್ವಾಮಿ ಲೇಔಟ್, ತ್ಯಾಗರಾಜನಗರ, ಬನಶಂಕರಿ 2ನೇ ಹಂತ, ಯಡಿಯೂರು, ಯಾರಬ್ ನಗರ, ಬನಶಂಕರಿ ದೇವಸ್ಥಾನ ವಾರ್ಡ್, ಚಿಕ್ಕಲ್ಲಸಂದ್ರ, ಕದಿರೇನಹಳ್ಳಿ ಭಾಗಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್, ಜೆಡಿಎಸ್ ಇತರ ಪಕ್ಷಗಳು ಸಾಕಷ್ಟು ತಯಾರಿ ಮಾಡಿಕೊಂಡಿವೆ. ಈ ಬಾರಿ ಅದೃಷ್ಟ ಯಾರಿಗೆ ಎಂಬುದು ಕಾದು ನೋಡಬೇಕಿದೆ.
'ಕ್ಷೇತ್ರದಲ್ಲಿ ಪಾರ್ಕ್, ಮೈದಾನಗಳು, ರಸ್ತೆಗಳು ಆಗಿವೆ. ಆದರೆ, ಇನ್ನು ಚರಂಡಿಗಳು, ರಸ್ತೆ, ಮೋರಿ ಕೆಲಸ ಆಗಬೇಕು. ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಇನ್ನೂ ಹೆಚ್ಚಾಗಿ ಆಗಬೇಕು. ಇಲ್ಲಿ ಪ್ರತಿಸ್ಪರ್ಧಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್. ಈ ಬಾರಿ ಜಿದ್ದಾಜಿದ್ದಿ ಇದೆ' ಎನ್ನುತ್ತಾರೆ ಸ್ಥಳೀಯ ಚಂದನ್.
'ಪದ್ಮನಾಭನಗರ ಕ್ಷೇತ್ರದಲ್ಲಿ ಇನ್ನು ಅಭಿವೃದ್ಧಿ ಕೆಲಸಗಳು ಆಗಬೇಕು. ಹೈಟೆಕ್ ಸರ್ಕಾರಿ ಆಸ್ಪತ್ರೆಗಳಿಲ್ಲ. ಹೆರಿಗೆ ಆಸ್ಪತ್ರೆ ಬೇಕು. ಕೆಲವು ಕಡೆ ಕಟ್ಟಿರುವ ಶೌಚಾಲಯಗಳು ಒಡೆದಿದ್ದಾರೆ. ಆಟೋ, ಕ್ಯಾಬ್ ಚಾಲಕರಿಗೆ ಶೌಚಾಲಯಗಳೇ ಇಲ್ಲ. ಶೌಚಾಲಯಗಳು ನಿರ್ಮಾಣವಾಬೇಕು. ಕೆಲವು ಕಡೆ ರಸ್ತೆಗಳೇ ಇಲ್ಲ. ಶಾಲೆಗಳು ಅಭಿವೃದ್ಧಿ ಆಗಬೇಕು. ಕಸ ಸ್ವಚ್ಛ ಆಗಬೇಕು. ಈ ಕ್ಷೇತ್ರದ ಕೆಲ ಕಡೆ ಮಾತ್ರ ಅಭಿವೃದ್ಧಿ ಆಗಿದೆಯೇ ಹೊರತು ಬಹುತೇಕ ಕಡೆ ಹಾಗೆಯೆ ಇದೆ. ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಮೂರು ಪಕ್ಷಗಳಲ್ಲಿ ಪೈಪೋಟಿ ಇದೆ. ಮೂವತ್ತು ವರ್ಷದಿಂದ ಒಬ್ಬರೇ ಶಾಸಕರಿದ್ದಾರೆ. ಈ ಬಾರಿ ಶಾಸಕರ ಬದಲಾವಣೆಗೆ ಜನ ಬಯಸಿದ್ದಾರೆ' ಎನ್ನುತ್ತಾರೆ ಸ್ಥಳೀಯ ನಿವಾಸಿ ವೆಂಕಟೇಶ್.
ಇದನ್ನೂ ಓದಿ: ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಅಲ್ಲ, ಭ್ರಷ್ಟ ಸರ್ಕಾರ: ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ವಾಗ್ದಾಳಿ