ಬೆಂಗಳೂರು: ಪಾದರಾಯನಪುರದಲ್ಲಿ ನಿನ್ನೆ ನಡೆದ ಗಲಾಟೆಯನ್ನ ಮೊದಲೇ ಪ್ಲಾನ್ ಮಾಡಿ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಮೂಲ ಕಾರಣವಾದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾತ್ರಿ ಘಟನೆಯ ವಿಡಿಯೋಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದರಲ್ಲಿ ಇಬ್ಬರು ಮಹಿಳೆಯರ ಪಾತ್ರ ಹೈಲೈಟ್ ಆಗಿದೆ. ಫರೋಜಾ @ ಡಾನ್ ಎಂಬ ಮಹಿಳೆ ಹುಡುಗರನ್ನು ಗಲಾಟೆಗೆ ಪ್ರಚೋದಿಸಿದ್ದಾಳೆ. ಅಲ್ಲದೆ ನಿನ್ನೆಯ ಗಲಾಟೆಯಲ್ಲಿ ಸಾಕಷ್ಟು ಜನರಿಗೆ ಈಕೆಯು ಬೆಂಬಲ ನೀಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಫರೋಜಾಳನ್ನು ಬಂಧಿಸಿರುವ ಪೊಲೀಸರು, ಗಲಾಟೆಗೆ ಮಾಡಲು ಪ್ರಚೋದಿಸಿದ ಇನ್ನೋರ್ವ ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಘಟನಾ ಸ್ಥಳದಲ್ಲಿ ಹೆಚ್ಚುವರಿ ಆಯುಕ್ತ ಸೋಮೇಂದ್ರ ಮುಖರ್ಜಿ ಹಾಗೂ ಡಿಸಿಪಿ ರಮೇಶ್ ಬಾನೊತ್ ಮೊಕ್ಕಾಂ ಹೂಡಿದ್ದಾರೆ. ಅಧಿಕಾರಿಗಳು ತಿಳಿಸಿರುವ ಪ್ರಕಾರ ಒಟ್ಟಾರೆ 54 ಜನರನ್ನು ವಶಕ್ಕೆ ಪಡೆಯಲಾಗಿದ್ದು ಇನ್ನೂ ಕೆಲವರು ಸಿಕ್ಕಿಲ್ಲ. ಅವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಗಲಾಟೆಗೆ ಸಂಬಂಧಿಸಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಆರೋಗ್ಯ ಇಲಾಖೆಯಿಂದ ಒಂದು ದೂರು ಸೇರಿದಂತೆ ಇನ್ನುಳಿದ ನಾಲ್ಕು ಸುಮೋಟೋ ಕೇಸ್ ದಾಖಲಿಸಲಾಗಿದೆ.
ಹಲವು ಆಯಾಮಗಳಲ್ಲಿ ತನಿಖೆ:
ಮತ್ತೊಂದೆಡೆ ಗಲಾಟೆ ಮಾಡಿದ ಕೆಲವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಇದರಲ್ಲಿ ಓರ್ವ ಮಹಿಳೆಯನ್ನು ವಶಕ್ಕೆ ಪಡೆದಿದ್ದೇವೆ. ಆಕೆ ಗಾಂಜಾ ಮಾರಾಟ ಮಾಡುತ್ತಿದ್ದಳು. ತನ್ನ ಹುಡುಗರನ್ನು ಸ್ಥಳಕ್ಕೆ ಕರೆಯಿಸಿ ಗಲಾಟೆಗೆ ಪ್ರಚೋದನೆ ನೀಡಿದ್ದಳು ಎಂಬ ಮಾಹಿತಿ ಇದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಲಾಟೆ ನಡೆದದ್ದು ಯಾಕೆ?
ಪಾದರಾಯನಪುರ ವಾರ್ಡ್ ನಲ್ಲಿ 18 ಕೊರೊನಾ ಸೋಂಕಿತರು ಇದ್ದು, ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಹೀಗಾಗಿ 300 ಕ್ಕೂ ಹೆಚ್ಚು ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ 60 ಜನರನ್ನು ನಿನ್ನೆ ಆಸ್ಪತ್ರೆಗೆ ಸ್ಥಳಾಂತರಿಸಿ ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ತೀರ್ಮಾನಿಸಿತ್ತು. ಅದರಂತೆ ಸಂಜೆ 4 ಗಂಟೆಯಿಂದ 15 ಜನರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಉಳಿದ 45 ಜನರನ್ನು ಆಸ್ಪತ್ರೆಗೆ ರವಾನಿಸುವ ಕೆಲಸ ಮುಂದುವರೆಸಿದ್ದರು. ಈ ವೇಳೆ ಕೆಲವರು ನಮ್ಮ ಶಾಸಕರು ಬರಲಿ, ಆಮೇಲೆ ಕರೆದುಕೊಂಡು ಹೋಗಿ. ನಮಗೆ ಖಾಯಿಲೆಯ ಯಾವ ಲಕ್ಷಣಗಳೂ ಇಲ್ಲ. ನಮಗೆ ಏನೂ ಆಗಿಲ್ಲ. ಸುಮ್ಮನೇ ಕರೆದುಕೊಂಡು ಹೋಗುತ್ತಿದ್ದೀರಿ. ನಾವಿರುವ ಜಾಗದಲ್ಲೇ ಚಿಕಿತ್ಸೆ ಕೊಡಿ. ನಮ್ಮನ್ನೇ ಟಾರ್ಗೆಟ್ ಮಾಡಬೇಡಿ ಎಂದು ಗಲಾಟೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಗಲಾಟೆಯಲ್ಲಿ ಆಗಿದ್ದೇನು?
ಗುಂಪು ಗುಂಪಾಗಿ ಬಂದ ಜನಗಳು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರು. ತಳ್ಳಾಟ ನೂಕಾಟ ಆದಾಗ ಮಧ್ಯೆ ಬಂದಿದ್ದ ಪೊಲೀಸರಿಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ರಕ್ಷಿಸಿ ಅಲ್ಲಿಂದ ಹೊರ ಕರೆತಂದಿದ್ದಾರೆ. ಆದರೆ ಇದೇ ವೇಳೆ ಪಾದರಾಯನಪುರದಲ್ಲಿ ಪ್ರತ್ಯೇಕವಾಗಿ 4 ಕಡೆ ದಾಂಧಲೆ ನಡೆಸಿದ ಕಿಡಿಗೇಡಿಗಳು, ನಂತರ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಖಾರದ ಪುಡಿ, ದೊಣ್ಣೆ, ರಾಡು ಹಿಡಿದು ರಸ್ತೆಯಲ್ಲಿ ವಿಕೃತಿ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಘಟನೆ ನಂತರ ಪಾದರಾಯನಪುರ ಸುತ್ತಲೂ ಖಾಕಿ ಸರ್ಪಗಾವಲು ಹಾಕಲಾಗಿದ್ದು. ಒಬ್ಬ ನರಪಿಳ್ಳೆಯೂ ಹೊರಹೋಗದಂತೆ ಬಂದೋಬಸ್ತ್ ಮಾಡಲಾಗಿದೆ. ಘಟನಾ ಸ್ಥಳದಲ್ಲಿದ್ದ ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಗಲಾಟೆಯಲ್ಲಿ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.