ಬೆಂಗಳೂರು: ಲಾಕ್ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಬಿಬಿಎಂಪಿ ಕಾರ್ಪೊರೇಟರ್ ಇಮ್ರಾನ್ ಪಾಷ ಮತ್ತವರ ಬೆಂಬಲಿರಗನ್ನು ನಗರದ 5ನೇ ಎಸಿಎಂಎಂ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕೊರೊನಾ ಸೋಂಕಿಗೆ ಗುರಿಯಾಗಿದ್ದ ನಗರದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದ ವೇಳೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರು. ನೂರಾರು ಬೆಂಬಲಿಗರು ಒಂದೆಡೆ ಸೇರಿ ಅದ್ಧೂರಿಯಾಗಿ ಸ್ವಾಗತ ಕೋರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇಮ್ರಾನ್ ಪಾಷ ಮತ್ತವರ ಬೆಂಬಲಿಗರನ್ನು ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಬಂಧಿಸಿದ್ದರು.
ಬಂಧನದ ಬಳಿಕ ವಿಚಾರಣೆ ನಡೆಸಿದ್ದ ಪೊಲೀಸರು ಗುರುವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಗರದ 5ನೇ ಎಸಿಎಂಎಂ ಕೋರ್ಟ್ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಇಮ್ರಾನ್ ಪಾಷ ಸೇರಿದಂತೆ ಎಲ್ಲ 23 ಆರೋಪಿಗಳನ್ನು ಜೂನ್ 22 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.