ಬೆಂಗಳೂರು : ಪಾದರಾಯನಪುರದಲ್ಲಿ ಬಿಬಿಎಂಪಿ ಮತ್ತು ಆರೋಗ್ಯಾಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದರಾಯನಪುರದ ಸುತ್ತ-ಮುತ್ತ ಖಾಕಿ ಕಣ್ಗಾವಲು ಹಾಕಲಾಗಿದೆ.
ಸದ್ಯ ಪೊಲೀಸರ ನಿಯಂತ್ರದಣಲ್ಲಿರುವ ಪಾದರಾಯನಪುರದಲ್ಲಿ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ 2 ಡಿಸಿಪಿ, 6 ಎಸಿಪಿ, 10 ಕ್ಕೂ ಹೆಚ್ಚು ಇನ್ಸ್ಪೆಕ್ಟರ್, 20 ಕ್ಕೂ ಅಧಿಕ ಪಿಎಸ್ಐ, 5 ಕೆಎಸ್ಆರ್ಪಿ ತುಕಡಿ, 100 ಕ್ಕೂ ಹೆಚ್ಚು ಸಿವಿಲ್ ಪೊಲೀಸರು, ಒಂದು ಡಿ-ಸ್ವಾಟ್ ಅನ್ನು ನಿಯೋಜನೆ ಮಾಡಲಾಗಿದೆ.
ಇನ್ನು ಹಲವು ಮಂದಿಯನ್ನು ಬಂಧಿಸಿರುವ ಕಾರಣ ಜೆಜೆ ನಗರ ಠಾಣೆ ಎದುರು ಕೆಲ ಮುಸ್ಲಿಂ ಮಹಿಳೆಯರು ಹೈಡ್ರಾಮಾ ಸೃಷ್ಟಿಸಿದ ಘಟನೆ ಕೂಡ ಬೆಳಕಿಗೆ ಬಂದಿದೆ. ‘ನಮ್ಮ ಪತಿಯನ್ನು ಸುಖಾ-ಸುಮ್ಮನೆ ಬಂಧಿಸಲಾಗಿದೆ. ಹೊಸಪೇಟೆಯಿಂದ ಕೂಲಿ ಮಾಡಲು ಬಂದಿದ್ದೇವೆ. ದಯವಿಟ್ಟು ಬಿಟ್ಟುಬಿಡಿ ಎಂದು ಠಾಣೆ ಎದುರು ಗೋಗರೆಯುತ್ತಿದ್ದಾರೆ.
ಆದರೆ, ಕೂಡಲೇ ಜೆಜೆ ನಗರ ಪೊಲೀಸರು ಕರ್ಫ್ಯೂ ಜಾರಿಯಲ್ಲಿದೆ. ಇಲ್ಲಿಂದ ಹೊರಟು ಹೋಗಿ. ಅವರನ್ನು ಈಗಾಗಲೇ ಬಂಧಿಸಲಾಗಿದೆ. ಅವರು ಅಮಾಯಕರಾದರೇ ನೀವು ಕಾನೂನಿನ ಚೌಕಟ್ಟಿನಡಿ ಹೋರಾಟ ಮಾಡಿ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಆರೋಪಿಗಳ ಜಾಮೀನಿಗೆ ಐದಾರು ಜನ ವಕೀಲರ ತಂಡ ಎಸಿಪಿ ಕೃಷ್ಣಕುಮಾರ್ ಅವರನ್ನು ಭೇಟಿ ಮಾಡಿ, ಆರೋಪಿಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದಕ್ಕೆ ಅವರು, ಬಂಧಿಸಲಾಗಿರುವ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಕೀಲರಿಗೆ ತಿಳಿಸಿದ್ದಾರೆ.