ಬೆಂಗಳೂರು: ಪಾದರಾಯಪುರದಲ್ಲಿ ನಡೆದ ಗಲಭೆ ಪ್ರಕರಣದ ಸೂತ್ರಧಾರಿ ಎಂದು ಹೇಳಲಾಗುತ್ತಿರುವ ಪ್ರಮುಖ ಆರೋಪಿಯನ್ನು ಕೊನೆಗೂ ಜಗಜೀವನ್ ರಾಮ್ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪಾದರಾಯನಪುರ ನಿವಾಸಿ ಇರ್ಫಾನ್ ಬಂಧಿತ ಆರೋಪಿ. ಗಲಭೆ ಬಳಿಕ ಬಂಧನ ಭೀತಿಯಿಂದ ನಗರದಲ್ಲಿ ತಲೆಮರೆಸಿಕೊಂಡಿದ್ದ, ಈತನಿಗಾಗಿ ಕಳೆದ ಒಂದು ವಾರದಿಂದ ಶೋಧ ನಡೆಸುತ್ತಿದ್ದ ಪೊಲೀಸರಿಗೆ ಇಂದು ಸಿಕ್ಕಿಬಿದ್ದಿದ್ದಾನೆ. ಸದ್ಯ ಈತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುವ ಮೊದಲು ಕೊರೊನಾ ತಪಾಸಣೆ ನಡೆಸಲಿದ್ದಾರೆ. ವರದಿ ಬಂದ ಬಳಿಕವಷ್ಟೇ ತೀವ್ರ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೊರೊನಾ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಬಿಬಿಎಂಪಿ ಸೀಲ್ಡೌನ್ ಮಾಡಿತ್ತು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಶಂಕಿತರನ್ನು ಕ್ವಾರಂಟೈನ್ ಗೆ ಕರೆದೊಯ್ಯುವಾಗ ಆರೋಗ್ಯ ಅಧಿಕಾರಿಗಳ ಹಾಗೂ ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪುಂಡಾಟ ಮೆರೆದಿದ್ದರು. ಸಾಮಾಜಿಕ ಅಂತರಕ್ಕೂ ಕ್ಯಾರೆ ಅನ್ನದೇ 300ಕ್ಕಿಂತ ಹೆಚ್ಚಿನ ಜನರು ಏಕಾಏಕಿ ಮುಗಿಬಿದ್ದು ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಗೆ ಕಾರಣರಾಗಿದ್ದರು. ಗಲಾಟೆ ಹಿಂದೆ ಆರೋಪಿ ಇರ್ಫಾನ್ ಪ್ರಮುಖ ಆರೋಪಿ ಎಂಬ ಆರೋಪ ಕೇಳಿಬಂದಿತ್ತು. ಗದ್ದಲದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.