ಬೆಂಗಳೂರು: ಜೆಡಿಎಸ್ನಿಂದ ಬಿಜೆಪಿಯತ್ತ ಮುಖಮಾಡಿರುವ ವಿಧಾನಪರಿಷತ್ ಸದಸ್ಯ ಪುಟ್ಟಣ್ಣಗೆ ತಿರುಗೇಟು ನೀಡಲು ಜೆಡಿಎಸ್ ತಂತ್ರಗಾರಿಕೆ ರೂಪಿಸಿದೆ.
ಮುಂದಿನ ವರ್ಷ ನಡೆಯುವ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.ಪದ್ಮನಾಭನಗರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಿ ಎ.ಪಿ.ರಂಗನಾಥ್ ಅವರಿಗೆ ಮೇಲ್ಮನೆ ಚುನಾವಣೆಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
ಪುಟ್ಟಣ್ಣ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿದ್ದು, ಮೂರು ಬಾರಿ ಆಯ್ಕೆಯಾಗಿದ್ದಾರೆ. ಅವರ ಪರಿಷತ್ ಸದಸ್ಯತ್ವ ಅವಧಿಯು 2020ರ ಜೂನ್ ತಿಂಗಳವರೆಗೆ ಇದೆ. ಇದೀಗ ಪುಟ್ಟಣ್ಣ ಜೆಡಿಎಸ್ ತೊರೆದು ಬಿಜೆಪಿಯಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿತಂತ್ರ ರೂಪಿಸಿದ್ದು,ಇದೀಗ ಮೇಲ್ಮನೆ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.ಪುಟ್ಟಣ್ಣ ಅವರನ್ನು ಮಣಿಸಲು ರಂಗನಾಥ್ ಸೂಕ್ತ ಅಭ್ಯರ್ಥಿ ಎಂಬ ಕಾರಣಕ್ಕಾಗಿ ಜೆಡಿಎಸ್ ವರಿಷ್ಠರು ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ.