ಬೆಂಗಳೂರು : ಕೋವಿಡ್ ನಿಯಂತ್ರಣಕ್ಕೆ ಯೋಜನೆ ರೂಪಿಸಿರುವ ರಾಜ್ಯ ಸರ್ಕಾರ, ಇದೀಗ ಹೋಂ ಕ್ವಾರಂಟೈನ್ ಪರಿಣಾಮಕಾರಿಯಾಗಿ ಜಾರಿಗೆ ತರಲು ಪೊಲೀಸ್, ಗೃಹರಕ್ಷಕ ದಳ ಹಾಗೂ ಬಿಬಿಎಂಪಿ ಒಳಗೊಂಡಂತೆ ವಾರ್ಡ್ ಮಟ್ಟದಲ್ಲಿ ‘ಹೋಂ ಕ್ವಾರಂಟೈನ್ ನಿರ್ವಹಣಾ ತಂಡ’ ರಚಿಸಿದೆ.
ವಿಧಾನಸೌಧದಲ್ಲಿ ಬಿಬಿಎಂಪಿ, ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹೋಂ ಕ್ವಾರಂಟೈನ್ ಹಾಗೂ ಕಂಟೇನ್ಮೆಂಟ್ ವಲಯಗಳ ಮೇಲೆ ಹೆಚ್ಚಿನ ನಿಗಾವಹಿಸಲು ಮೂರು ಅಂಶಗಳ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಕಂಟೇನ್ಮೆಂಟ್, ಹೋಂ ಕ್ವಾರಂಟೈನ್ ಹಾಗೂ ಸೀಲ್ಡೌನ್ಗಳ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಸಂಬಂಧ ಬಿಬಿಎಂಪಿ, ಪೊಲೀಸ್ ಮತ್ತು ಗೃಹ ರಕ್ಷಕ ದಳ ಜಂಟಿಯಾಗಿ ಕಾರ್ಯನಿರ್ವಹಣೆಗೆ ಸೂಚಿಸಲಾಗಿದೆ ಎಂದರು.
ಸಂಘ ಸಂಸ್ಥೆಗಳ ಬಳಕೆಗೆ ನಿರ್ಧಾರ : ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮೇಲೆ ನಿಗಾವಹಿಸಲು ಬಿಬಿಎಂಪಿ, ಪೊಲೀಸ್, ಗೃಹರಕ್ಷಕ ದಳ ಮಾತ್ರವಲ್ಲದೆ ಸಿವಿಲ್ ಡಿಫೆನ್ಸ್ ಮತ್ತು ಸಂಘ-ಸಂಸ್ಥೆಗಳ ಸದಸ್ಯರನ್ನು ಬಳಸಲು ನಿರ್ಧರಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿರುವ ಸಿವಿಲ್ ಡಿಫೆನ್ಸ್ ದಳದಲ್ಲಿ ಸುಮಾರು 13 ಸಾವಿರ ಮಂದಿ ಇದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಪೂರೈಕೆಯಲ್ಲಿ ಅವರನ್ನು ಬಳಸಿಕೊಳ್ಳಲಾಗಿತ್ತು. ಅದೇ ರೀತಿ ಕೊರೊನಾ ಸಂದರ್ಭದಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡಲು ಸ್ವಯಂ ಇಚ್ಛೆಯಿಂದ ಸಂಘ-ಸಂಸ್ಥೆಗಳ 60 ಸಾವಿರ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಮೂರು ಅಂಶಗಳ ಯೋಜನೆ ಏನು? : ಹೋಂ ಕ್ವಾರಂಟೈನ್ ವ್ಯಕ್ತಿಗಳ ಮೇಲೆ ನಿಗಾವಹಿಸಲು ಪ್ರತಿ ವಾರ್ಡ್‌ನಲ್ಲಿ ಬಿಬಿಎಂಪಿ, ಪೊಲೀಸ್, ಗೃಹ ರಕ್ಷಕ ದಳ, ಸಿವಿಲ್ ಡಿಫೆನ್ಸ್ ಹಾಗೂ ಸಂಘ ಸಂಸ್ಥೆಗಳ ಸದಸ್ಯರ ತಂಡ ರಚನೆ ಮಾಡಲಾಗುತ್ತದೆ. ಸೀಲ್‌ಡೌನ್ ಪ್ರದೇಶಗಳ ನಿರ್ಮಾಣಕ್ಕೆ ಗೃಹ ರಕ್ಷಕರ ನಿಯೋಜನೆ. ಆ ಪ್ರದೇಶಗಳ ಭದ್ರತಾ ಜವಾಬ್ದಾರಿ ಡಿಸಿಪಿಗಳ ಹೆಗಲಿಗೇರಲಿದೆ. ನಗರದಲ್ಲಿ ರಾತ್ರಿ ಕರ್ಪ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. 600 ಆಟೋಗಳ ಮೂಲಕ ರಾತ್ರಿ ಕರ್ಪ್ಯೂ, ಮಾಸ್ಕ್ ಧರಿಸದೆ ದಂಡ ಹಾಗೂ ಸೀಲ್‌ಡೌನ್ ಪ್ರದೇಶ ಜನರ ನಡವಳಿಕೆ ಕುರಿತು ಪ್ರಚಾರ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ರಾತ್ರಿ ಕರ್ಪ್ಯೂವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ. ಲಾಕ್ಡೌನ್ ಜಾರಿಗೊಳಿಸುವ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿದರು.