ಬೆಂಗಳೂರು : ಅವಧಿ ಮೀರಿ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಸುಬ್ರಮಣ್ಯ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಅಬಕಾರಿ ಕಾಯ್ದೆಯ ಉಲ್ಲಂಘನೆ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ಷರತ್ತುಗಳನ್ನು ಉಲ್ಲಂಘಿಸಿರುವ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ಕಳೆದ ಜನವರಿ 3ರ ರಾತ್ರಿ ಇಲ್ಲಿನ ಜೆಟ್ ಲ್ಯಾಗ್ ರೆಸ್ಟೋರೆಂಟ್ ಬಾರ್ನಲ್ಲಿ ಕೆಲವರು ಬಂದು ಪಾರ್ಟಿ ಮಾಡಿದ್ದರು. 12:30ರ ಸುಮಾರಿಗೆ ಸ್ಥಳಕ್ಕೆ ತೆರಳಿದ್ದ ಬೀಟ್ ಪೊಲೀಸ್ ಸಿಬ್ಬಂದಿ, ಪಬ್ ಕ್ಲೋಸ್ ಮಾಡುವಂತೆ ತಿಳಿಸಿ ಬಂದಿದ್ದರು. ಆದರೆ ಅವಧಿ ಮೀರಿ, ರಾತ್ರಿ 1 ಗಂಟೆಯ ನಂತರವೂ ಲಿಕ್ಕರ್ ಸರ್ವ್ ಮಾಡಲಾಗಿದೆ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡು ರಾತ್ರಿ ಪಾಳಿಯಲ್ಲಿದ್ದ ಪಿಎಸ್ಐ ನೀಡಿರುವ ದೂರಿನನ್ವಯ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಅಬಕಾರಿ ಕಾಯ್ದೆಯಡಿ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಕಾನೂನುಬಾಹಿರವಾಗಿ ರೆಸ್ಟೋರೆಂಟ್ ತೆರೆದು ಪಾರ್ಟಿಗೆ ಅನುವು ಮಾಡಿಕೊಟ್ಟಿರುವ ಜೆಟ್ ಲಾಗ್ ರೆಸ್ಟೋರೆಂಟ್ ಮಾಲೀಕ ಹಾಗೂ ಇತರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರಿಗೆ ನೋಟಿಸ್ ನೀಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ 8 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್, ಜೆಟ್ ಲಾಗ್ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಮಾಲೀಕರು ಹಾಗೂ ಮ್ಯಾನೇಜರ್ಗೆ ನೋಟಿಸ್ ನೀಡಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಯಾರ್ಯಾರು ಅಂದು ಪಾರ್ಟಿ ನಡೆಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. 8 ಮಂದಿ ಪಾರ್ಟಿಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆದ್ರೆ ಯಾವ ಸಮಯಕ್ಕೆ ವಾಪಸ್ ಹೋಗಿದ್ದಾರೆ ಎಂಬ ಬಗ್ಗೆ ಹೇಳಿಕೆ ಪಡೆಯಬೇಕಾಗಿದೆ. ಸುಬ್ರಮಣ್ಯಪುರ ಇನ್ಸ್ಪೆಕ್ಟರ್ ಅವರು ತನಿಖೆ ಮುಂದುವರೆಸುತ್ತಾರೆ ಎಂದರು.
ನೋಟಿಸ್ ಕೊಟ್ಟಿರುವ ಬಹುತೇಕರು ವಿದೇಶದಲ್ಲಿದ್ದಾರೆ. ಅಲ್ಲಿಂದ ಬಂದ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಪೊಲೀಸರ ಲೋಪದ ಕುರಿತು ತನಿಖೆ ನಡೆಸುವಂತೆ ಮಲ್ಲೇಶ್ವರಂ ಎಸಿಪಿಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಅವಧಿ ಮೀರಿ ಪಾರ್ಟಿ: ಪಬ್ ಮಾಲೀಕರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು