ಬೆಂಗಳೂರು: ರಾಜ್ಯದ ಬಂಧಿಖಾನೆಗಳಲ್ಲಿರುವ ಕೈದಿಗಳಿಗೆ ಹೊರ ಗುತ್ತಿಗೆ ಮೂಲಕ ಊಟ ತರಿಸಿಕೊಡುವುದು ಅಪಾಯಕಾರಿ. ಅಷ್ಟೇ ಅಲ್ಲ, ಜೈಲು ಭದ್ರತೆಗೂ ಅಪಾಯವಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿನ ಜೈಲುಗಳ ಸುಧಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಜೈಲುಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸುವ ಕುರಿತು ಸಲ್ಲಿಸಿದ್ದ ವರದಿ ಪರಿಶೀಲಿಸಿದ ಪೀಠ, ಉಪಬಂಧಿಖಾನೆಗಳಲ್ಲಿ ಕೈದಿಗಳಿಗೆ ಆಹಾರ ಪೂರೈಸಲು ಹೊರ ಗುತ್ತಿಗೆ ನೀಡಿರುವುದು ಸರಿಯಲ್ಲ ಎಂದಿತು.
ನಿಯಮಗಳ ಪ್ರಕಾರ ಕನಿಷ್ಠ 25 ಕೈದಿಗಳಿಗೆ ಓರ್ವ ಅಡುಗೆ ಭಟ್ಟರು ಇರಬೇಕು, ಆದರೆ ಕೈದಿಗಳ ಸಂಖ್ಯೆ ಕಡಿಮೆ ಇದೆ ಎನ್ನುವ ಕಾರಣಕ್ಕೆ ಉಪಬಂಧಿಖಾನೆಗಳಲ್ಲಿ ಆಹಾರ ಪೂರೈಕೆಯನ್ನು ಹೊರಗುತ್ತಿಗೆಗೆ ನೀಡಿರುವುದು ಅಪಾಯಕಾರಿ. ಆಹಾರ ಪೂರೈಕೆ ನೆಪದಲ್ಲಿ ಯಾವ ವಸ್ತುಗಳನ್ನು ಬೇಕಾದರೂ ಜೈಲಿನ ಒಳಗೆ ಸಾಗಿಸಬಹುದು. ಇದು ಕೈದಿಗಳ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದಲೂ ಸರಿಯಾದ ಕ್ರಮವಲ್ಲ. ಇದು ಕಾರಾಗೃಹದ ನಿಯಮಗಳಿಗೂ ವಿರುದ್ಧ ಎಂದು ಹೇಳಿತು.
ಅಲ್ಲದೇ, ನಿಯಮಾವಳಿಯಂತೆ ಕಾರಾಗೃಹಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಹಾಗೆಯೇ ರಾಜ್ಯ ಇಂದಿಗೂ 1978ರ ಕಾರಾಗೃಹ ನಿಯಮಗಳನ್ನು ಅನುಸರಿಸುತ್ತಿದೆ. ಹೀಗಾಗಿ, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಮಾದರಿ ಜೈಲು ಸಂಹಿತೆಗೆ ಅನುಗುಣವಾಗಿ ರಾಜ್ಯದಲ್ಲೂ ನಿಯಮಗಳನ್ನು ಪರಿಷ್ಕರಿಸಬೇಕು ಎಂದು ನಿರ್ದೇಶಿಸಿತು.