ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷಪೂರಿತ ಪ್ರಸಾದ ಸೇವಿಸಿ ಹಲವರು ಮೃತಪಟ್ಟಿದ್ದ ಸುದ್ದಿ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ನಂತರ ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಪ್ರಸಾದ ವಿತರಣೆಗೆ ಅನುಮತಿ ಪಡೆದುಕೊಳ್ಳುವಂತೆ ಸರ್ಕಾರದಿಂದ ಆದೇಶಿಸಲಾಗಿತ್ತು. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ನಡೆದ ಈ ಘಟನೆಯಿಂದ ಎಚ್ಚೆತ್ತು ಬೆಂಗಳೂರಿನ ಹೆಸರುವಾಸಿ ಆಸ್ಪತ್ರೆಯಾದ ವಾಣಿ ವಿಲಾಸ ಹೆರಿಗೆ ಆಸ್ಪತ್ರೆಯಲ್ಲಿ ಹೊರಗಿನಿಂದ ತರುವ ಆಹಾರಕ್ಕೆ ನಿಷೇಧ ಹೇರಲಾಗಿದೆ.
ಅಂದಹಾಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಬಹಳ ವರ್ಷಗಳಿಂದ ಮಕ್ಕಳ ಹುಟ್ಟು, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಸವಿ ನೆನಪಿಗಾಗಿ ಹಲವರು ಆಸ್ಪತ್ರೆಗೆ ಬಂದು ರೋಗಿಗಳಿಗೆ ಸಿಹಿ ಪದಾರ್ಥಗಳು, ಊಟದ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಈ ಸಂಪ್ರದಾಯದವನ್ನು ಸದ್ಯ ವಾಣಿ ವಿಲಾಸ ಆಸ್ಪತ್ರೆಯ ಆಡಳಿತ ಮಂಡಳಿ ನಿಷೇಧಿಸಿದೆ.
ಸಿಹಿ ಪದಾರ್ಥದ ಜೊತೆ ಜೊತೆಗೆ ಇತರೆ ತಿಂಡಿ ತಿನಿಸುಗಳನ್ನು ನೀಡುವುದನ್ನ ಆಸ್ಪತ್ರೆಯಲ್ಲಿ ಬಂದ್ ಮಾಡಲಾಗಿದೆ. ಇವುಗಳ ಬದಲು ಕೇವಲ ಹಣ್ಣು ಹಂಪಲುಗಳನ್ನು ನೀಡುವಂತೆ ಸೂಚಿಸಲಾಗಿದೆ ಅಂತಾರೆ ಸೂಪರಿಂಟೆಂಡೆಂಟ್ ಗೀತಾ ಶಿವಮೂರ್ತಿ. ಇದರೊಟ್ಟಿಗೆ ತಾಯಂದಿರಿಗೆ ಮತ್ತು ನವಜಾತ ಶಿಶುಗಳಿಗೆ ಉಡುಪುಗಳು, ರ್ಯಾಪಿಂಗ್ ಟವಲ್ಸ್, ಬೆಡ್ ಶೀಟ್, ಬ್ಲಾಂಕೆಟ್ಸ್ಗಳನ್ನು ತಂದುಕೊಡುತ್ತಿದ್ದಾರೆ. ಇದಕ್ಕೆಲ್ಲ ಅವಕಾಶ ಕಲ್ಪಿಸಲಾಗಿದ್ದು, ಇತರೆ ತಿಂಡಿ ತಿನಿಸುಗಳನ್ನ ತರದಂತೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ, ಸುಳ್ವಾಡಿ ಗ್ರಾಮದ ದುರಂತದಿಂದ ಆಸ್ಪತ್ರೆಯಲ್ಲೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಹಣ್ಣು-ಹಂಪಲು ತಂದರೂ ಅದನ್ನ ಮೊದಲು ಆಸ್ಪತ್ರೆಯ ಸಿಬ್ಬಂದಿ ಸೇವಿಸಿ ಪರೀಕ್ಷಿಸಿದ ನಂತರವಷ್ಟೇ ರೋಗಿಗಳಿಗೆ ನೀಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.