ಬೆಂಗಳೂರು: ಎರಡು ಹಂತಗಳಲ್ಲಿ ನಡೆದ 5,728 ಗ್ರಾಮ ಪಂಚಾಯತ್ಗಳ 91,339 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬುಧವಾರ ನಡೆದಿದ್ದು, 54,041 ಸ್ಥಾನಗಳ ಫಲಿತಾಂಶ ಘೋಷಿಸಲಾಗಿದೆ. ಇನ್ನುಳಿದ 36,781 ಸ್ಥಾನಗಳ ಫಲಿತಾಂಶ ಇಂದು ಘೋಷಿಸುವುದಾಗಿ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ನಗೆ ಬೀರುವಂತೆ ಅವರ ಹಿಂದೆ ಕೆಲ ಕಾಂಗ್ರೆಸ್ ಹಾಗೂ ಜೆಡಿಎಸ್ನ ಅಭ್ಯರ್ಥಿಗಳು ಕೆಲ ಕಡೆ ವಿಜಯ ಪತಾಕೆ ಹಾರಿಸಿದರು. ಬ್ಯಾಲೆಟ್ ಪೇಪರ್ ಆದ ಕಾರಣ ಮತ ಎಣಿಕೆಯಲ್ಲಿ ವಿಳಂಬವಾಗಿದೆ. ಇನ್ನು ಕೆಲ ಕಡೆ ಮತ ಎಣಿಕಾ ಕಾರ್ಯಗಳು ನಡೆಯುತ್ತಿವೆ.
ಗ್ರಾಮ ಸಮರದ ಕದನ ಕಣ ನಿರೀಕ್ಷೆಯಂತೆಯೇ ಆಡಳಿತಾರೂಢ ಬಿಜೆಪಿಯು ಅರ್ಧ ಪಾಲು ಗೆದ್ದಾಗಿದೆ ಎಂದು ಆ ಪಕ್ಷ ಹೇಳಿಕೊಂಡಿದೆ. ಇನ್ನರ್ಧ ಗೆಲುವಿನ ನಿರೀಕ್ಷೆಯನ್ನೂ ಹೊಂದಿದೆ. ಅಂತೆಯೇ ಫೈಟ್ ನೀಡಿದ ಪ್ರತಿಪಕ್ಷ ಕಾಂಗ್ರೆಸ್ ಸಹಾ ಅಲ್ಪ ಮೇಲುಗೈ ಸಾಧಿಸಿದೆ.
ಇನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ನಾಯಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಸಚಿವ ಅಶೋಕ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗೆಲುವು ಸಾಧಿಸಿದವರಿಗೆ ಶುಭ ಕೋರಿದ್ದಾರೆ.
ಹಲವಾರು ಹೊಸತನಗಳಿಗೆ ಸಾಕ್ಷಿಯಾಯಿತು
ರಾಯಚೂರಿನ ಸತ್ಯವತಿ ಮತ್ತು ಮಹಾದೇವಮ್ಮ ಎಂಬ ಇಬ್ಬರು ಅಭ್ಯರ್ಥಿಗಳು ತಲಾ 180 ಮತಗಳನ್ನ ಪಡೆದಿದ್ದರು. ಹೀಗಾಗಿ, ಚೀಟಿ ಎತ್ತಿ ಜಯಗಳಿಸಿದವರನ್ನು ಘೋಷಿಸಲಾಯಿತು. ಚೀಟಿಯಲ್ಲಿ ಅಭ್ಯರ್ಥಿ ಸತ್ಯವತಿ ಹೆಸರು ಬಂದಿದ್ದರಿಂದ, ಮಹಾದೇವಮ್ಮ ಸೋಲೊಪ್ಪಿಕೊಳ್ಳಬೇಕಾಯಿತು.
ಮಂಡ್ಯ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಪತ್ನಿ ಅಶ್ವಿನಿ ರವಿಕುಮಾರ್ ಮತ್ತು ಮೂರನೇ ಬಾರಿ ಸ್ಪರ್ಧಿಸಿದ್ದ ಪತಿ ರವಿಕುಮಾರ್ ಜಯಗಳಿಸಿದ್ದಾರೆ.
ಅದೇ ರೀತಿ, ಮೈಸೂರಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಸ್ಪರ್ಧಿಸಿದ್ದ ಸ್ನಾತಕೋತ್ತರ ಪದವೀಧರೆ ರುಕ್ಮಿಣಿ ಕೂಡ ಗೆಲುವಿನ ನಗೆ ಬೀರಿದ್ದಾರೆ.
ಗಲಾಟೆ- ಗದ್ದಲ
ನಿಷೇಧಾಜ್ಞೆ ಉಲ್ಲಂಘಿಸಿ ಪೊಲೀಸರಿಗೆ ಅವಾಜ್ ಹಾಕಿದ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಓರ್ವ ಯುವಕ ಪೊಲೀಸರಿಗೆ ಆವಾಜ್ ಹಾಕಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆತನಿಗೆ ಲಾಠಿ ರುಚಿ ತೋರಿಸಿ ನಿಯಮ ಉಲ್ಲಂಘಿಸಿದ ಆರೋಪದಡಿ ಕೆಎಸ್‌ಆರ್‌ಪಿ ವಾಹನಕ್ಕೆ ಹತ್ತಿಸಿದ್ದಾರೆ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಮತ ಎಣಿಕೆ ಕೇಂದ್ರದ ಮುಂಭಾಗ ರಾತ್ರಿಯಾದರೂ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ್ದವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಇನ್ನು ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿ ರಾಜಕೀಯ ಪಕ್ಷವೊಂದರ ಸದಸ್ಯರು ಪಾಕ್ ಪರ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿದೆ.
ಹೀಗೆ ಲೋಕಸಭಾ ಚುನಾವಣಾ ರೇಂಜ್ಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯು ಈ ಬಾರಿ ಉತ್ತಮ ಸ್ಪಂದನೆಯೊಂದಿಗೆ ನಡೆದಿದೆ. ಮುಂದಿನ ಸೆಕೆಂಡ್ ಹಾಫ್ಗೆ ನಿರೀಕ್ಷೆಯೂ ಹೆಚ್ಚಾಗಿದೆ.