ಬೆಂಗಳೂರು : ಭ್ರಷ್ಟಾಚಾರ ನಿಲ್ಲಿಸಿ, ಬೆಂಗಳೂರು ಉಳಿಸಿ ಕಾರ್ಯಕ್ರಮ ಮಾಡ್ತಿದ್ದೇವೆ. ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಚುರುಕು ಮುಟ್ಟಿಸುತ್ತಿದ್ದೇವೆ ಎಂದು ಶಾಸಕ ಎನ್ ಎ ಹ್ಯಾರಿಸ್ ತಿಳಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜತೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾಳೆ ಟ್ರಿನಿಟಿ ಸರ್ಕಲ್ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರು ಪ್ರತಿಭಟನೆ ಮಾಡ್ತೇವೆ. 200 ಸಿಗ್ನಲ್, 26 ಫ್ಲೈ ಓವರ್, 25 ಮೆಟ್ರೋ ಸ್ಟೇಷನ್ಗಳಲ್ಲಿ ಪ್ರತಿಭಟನೆ ಏಕಕಾಲಕ್ಕೆ ನಡೆಯಲಿದೆ. ಭ್ರಷ್ಟಾಚಾರದ ಆರೋಪಗಳಿಗೆ ಇದುವರೆಗೆ ಉತ್ತರ ಕೊಡುವುದಕ್ಕಾಗಿಲ್ಲ. ಇನ್ಮುಂದೆ ಭ್ರಷ್ಟಾಚಾರದ ವಿರುದ್ಧ ಮತ್ತಷ್ಟು ಹೋರಾಟ ಮಾಡ್ತೇವೆ. 300 ಕ್ಕೂ ಹೆಚ್ಚು ಜಾಗಗಳಲ್ಲಿ ನಾಳೆ ನಮ್ಮ ಪ್ರತಿಭಟನೆ ನಡೆಯುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 40% ಕಮಿಷನ್ಗೆ ಕೊನೆಯೇ ಇಲ್ವಾ ಅನ್ನೋ ತರಹ ಆಗಿದೆ. ಯಾವ ಸಚಿವರೂ ಇದಕ್ಕೆ ಉತ್ತರ ಕೊಡ್ತಾ ಇಲ್ಲ, ಆರೋಪಕ್ಕೆ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಸುಮ್ನೆ ಪ್ರತಿಪಕ್ಷವಾಗಿ ಕೂರುವುದಕ್ಕೆ ನಾವು ತಯಾರಿಲ್ಲ. ಪ್ರಧಾನಿ ಕೂಡ ಇದುವರೆಗೆ 40% ಕಮಿಷನ್ ಗೆ ಉತ್ತರ ಕೊಟ್ಟಿಲ್ಲ. ಪ್ರಧಾನಿ ಕಚೇರಿಯಿಂದಲೂ ಉತ್ತರ ಸಿಗುತ್ತಿಲ್ಲ. ಪಿಎಸ್ಐ ಸ್ಕ್ಯಾಮ್ ಏನು ಮಾಡಿದ್ರು. ಹರಿಶ್ಚಂದ್ರನ ಮೊಮ್ಮಕ್ಕಳ ತರಹ ಮಾತಾಡ್ತಿದ್ದಾರೆ. ಭ್ರಷ್ಟಾಚಾರದ ದೊಡ್ಡ ಬೆಟ್ಟವನ್ನೇ ತಂದು ನಿಲ್ಸಿದ್ದಾರೆ. ಸರ್ಕಾರದಿಂದ ಕಳೆದ ಏಳೆಂಟು ತಿಂಗಳಿಂದ ಯಾವುದೇ ಮಾಸಾಶನ ಬರ್ತಾ ಇಲ್ಲ. ಅಂಥದ್ದನ್ನೂ ಕೂಡ ನಿಲ್ಸಿದಾರೆ ಅಂದ್ರೆ ಸರ್ಕಾರದ ಕೈಲಿ ದುಡ್ಡಿಲ್ವಾ? ಎಂದು ಪ್ರಶ್ನಿಸಿದರು.
ನಮ್ಮ ನಾಯಕರೇ ಹೇಳಿದ ಮೇಲೆ ನಿಮಗ್ಯಾಕೆ ಸಂಶಯ. ನಾವು ಮಾಡ್ತೀವೋ ಇಲ್ವೋ ಅನ್ನೋ ಅನುಮಾನವೇ ಬೇಡ. ನಾವು 165 ಭರವಸೆ ಕೊಟ್ಟು 158 ಭರವಸೆ ಈಡೇರಿಸಿದ್ದೇವೆ. ಅವರು ಯಾವುದನ್ನೂ ಕೂಡ ಈಡೇರಿಸಿಲ್ಲ. ಉತ್ತರವನ್ನೂ ಕೊಡ್ತಿಲ್ಲ. ನಾವು ಕೊಟ್ಟ ಭರವಸೆ ಈಡೇರಿಸಿಯೇ ಈಡೇರಿಸ್ತೇವೆ. ನೀವು ಸಂಶಯ ಯಾಕೆ ಇಟ್ಟುಕೊಳ್ತೀರಿ? ಸಂಶಯವನ್ನೇ ಇಟ್ಟುಕೊಳ್ಳಬೇಡಿ ಎಂದರು. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಪೂರ್ಣ ತಂಡ ಈ ಭ್ರಷ್ಟಾಚಾರದಲ್ಲಿ ಕೈಜೋಡಿಸಿದ್ದಾರೆ ಅನ್ನುವ ಅನುಮಾನ ಹುಟ್ಟಿಕೊಂಡಿದೆ. ವಾರಕ್ಕೆ ಒಂದು ಬಾರಿ ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಬರ್ತಾ ಇದ್ದಾರೆ. ಪ್ರಧಾನಿಗಳು ಬಂದಾಗ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾಯಿದಾರಾ?. ಬರೀ ಸುಳ್ಳು ಹೇಳುತ್ತಾರೆ. ವಯಸ್ಸಾದವರಿಗೆ, ಕಲಚೇತನರಿಗೆ ಕೊಡುವಂತಹ ಹಣವನ್ನು ಕೊಡುತ್ತಿಲ್ಲಾ. ಸರ್ಕಾರದಲ್ಲಿ ಹಣದ ಕೊರತೆ ಉಂಟಾಗಿದೆ. ಸರ್ಕಾರದ ಈ ಭ್ರಷ್ಟಾಚಾರವನ್ನು ಪ್ರತಿಪಕ್ಷವಾಗಿ ಖಂಡಿಸುತ್ತಿದ್ದೇವೆ. ಈ ಹಿನ್ನೆಲೆ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ಹೋರಾಟ : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಶೇ.40 ರಷ್ಟು ಕಮೀಷನ್ ದಂಧೆ ನಡೆಯುತ್ತಿದೆ ಎಂದು ದೊಡ್ಡ ಮಟ್ಟದ ಹೋರಾಟ ನಡೆಸಿತ್ತು. ಪೇ ಸಿಎಂ ಹೋರಾಟ ನಡೆಸಿ ಯಶಸ್ಸು ಕಂಡಿದೆ. ಡಿ ಕೆ ಶಿವಕುಮಾರ್, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮುಂತಾದ ನಾಯಕರು ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ನಗರವನ್ನು ಕೇಂದ್ರವಾಗಿಸಿಕೊಂಡು ಹಿಂದೆ ಇಂಧನ ಬೆಲೆ ಏರಿಕೆ ಖಂಡಿಸಿ ಹೋರಾಟ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.
ನಾಳೆ ಏಕಕಾಲಕ್ಕೆ 300 ಕಡೆಗಳಲ್ಲಿ ಹೋರಾಟ ನಡೆಯಲಿದೆ. ಮುಖ್ಯ ಹೋರಾಟ ಜನನಿಬಿಡ ರಸ್ತೆಯಾಗಿರುವ ಟ್ರಿನಿಟಿ ವೃತ್ತದಲ್ಲಿ ನಡೆಯಲಿದೆ. ಮತ್ತೊಮ್ಮೆ ವಾರದ ದಿನದಲ್ಲಿ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದು, ದೊಡ್ಡ ಮಟ್ಟದಲ್ಲಿ ಜನದಟ್ಟಣೆ ಉಂಟಾಗುವುದು ಶತಸಿದ್ಧ. ಟ್ರಿನಿಟಿ ವೃತ್ತದಲ್ಲಿಯೇ ಕಾಂಗ್ರೆಸ್ ಹೋರಾಟ ನಡೆಸಲಿದ್ದು, ಸರಿಸುಮಾರು ನಾಲ್ಕೈದು ಗಂಟೆ ಈ ಭಾಗದಲ್ಲಿ ಜನಸಂಚಾರ ಅಸ್ತವ್ಯಸ್ತಗೊಳ್ಳಲಿದೆ. ಒಟ್ಟಾರೆ ಕಾಂಗ್ರೆಸ್ ಹೋರಾಟ ಅಂದರೆ ದಟ್ಟಣೆಗೆ ದಾರಿ ಅನ್ನುವಂತಾಗಿದೆ.
ಕಾಂಗ್ರೆಸ್ ನಾಯಕರು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು: ಹಿಂದೆ ಬೆಂಗಳೂರಿನಲ್ಲಿ ನೀರಿಗಾಗಿ ಹೋರಾಟ ನಡೆಸಿ ಪಾದಯಾತ್ರೆ ಕೈಗೊಂಡ ಸಂದರ್ಭ ವಾರದ ದಿನದಲ್ಲೇ ಮೂರು ದಿನ ನಗರದಲ್ಲಿ ಸಂಚಾರ ದಟ್ಟಣೆ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕರು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ನಾಳೆ ಸಹ ಜನ ದಟ್ಟಣೆಯಲ್ಲಿ ಸಿಲುಕುವ ಆತಂಕಕ್ಕೆ ವಾಹನ ಸವಾರರು ಒಳಗಾಗಿದ್ದಾರೆ. ಒಟ್ಟು 300 ಕಡೆಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಯಲಿದೆ ಎಂದ ಮೇಲೆ ನಾಳಿನ ನಗರದ ಸ್ಥಿತಿ ಏನಾಗಲಿದೆ ಎನ್ನುವುದನ್ನು ಯಾರು ಬೇಕಾದರೂ ಊಹಿಸಬಹುದಾಗಿದೆ.
ಓದಿ : ‘ಡಿ’ ಕಾಂಗ್ರೆಸ್ ಸೋಲಿಸಲು ‘ಎಸ್‘ ಕಾಂಗ್ರೆಸ್ 500 ಕೋಟಿ ರೂ ಡೀಲ್ ಮಾಡಿದೆ: ಆರ್.ಆಶೋಕ್