ಬೆಂಗಳೂರು: ಕೋವಿಡ್ನಿಂದ ದುಡ್ಡು ಮಾಡುವ ದರಿದ್ರ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಸಿಎಂ ಗೃಹ ಕಛೇರಿ ಕೃಷ್ಣ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತ್ಯುತ್ತರ ನೀಡಿದರು.
ಸರ್ಕಾರ ಕೊರೊನಾ ವೈರಸ್ ನಿಯಂತ್ರಣ ಮಾಡಲು ಬಹಳ ಶ್ರಮ ಪಡುತ್ತಿದೆ. ಅದರಂತೆ ನಮಗೂ ಒಂದು ಆಸ್ಪತ್ರೆ ಹೊಣೆ ಕೊಡಿ ನಿಭಾಯಿಸುತ್ತೇವೆಂದು ಸಿದ್ದರಾಮಯ್ಯ ಹೇಳಲಿ. ಅದರ ಬದಲು ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ.
ವೈದ್ಯಕೀಯ ಉಪಕರಣಗಳಿಗೆ ಆರಂಭದಲ್ಲಿ ಹೆಚ್ಚಿನ ಬೆಲೆ ಇತ್ತು. ಈಗ ಆ ಉಪಕರಣಗಳ ಬೆಲೆ ಇಳಿದಿದೆ. ಮೊದಲಿನ ದರಗಳಿಗೆ ಹೋಲಿಸಿ ಸಿದ್ದರಾಮಯ್ಯ ಅವರು ಆರೋಪ ಮಾಡುವುದು ಸರಿಯಲ್ಲ. ಅವರ ಬಳಿ ದಾಖಲೆಗಳಿದ್ದರೆ ಸಲ್ಲಿಸಲಿ ದಾಖಲೆ ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸವಾಲು ಹಾಕಿದರು.
ಸ್ವಯಂಪ್ರೇರಿತ ಲಾಕ್ಡೌನ್ಗೆ ಸರ್ಕಾರದ ವಿರೋಧವಿಲ್ಲ:
ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡುವುದಿಲ್ಲ. ಲಾಕ್ಡೌನ್ ಮಾಡುವ ಚಿಂತನೆಯೂ ಸರ್ಕಾರದ ಮುಂದಿಲ್ಲ. ಲಾಕ್ಡೌನ್ ಮಾಡಿದರೂ ಕೊರೊನಾ ಹೋಗುವುದಿಲ್ಲ, ಮತ್ತೆ ಹೆಚ್ಚಾಗುತ್ತದೆ. ಕೆಲವು ಕಡೆ ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಮಾಡಿಕೊಳ್ಳುತ್ತಿದ್ದಾರೆ. ಸ್ವಯಂಪ್ರೇರಿತ ಲಾಕ್ಡೌನ್ಗೆ ಸರ್ಕಾರದ ವಿರೋಧ ಇಲ್ಲ ಎಂದರು.
ಈಗಾಗಲೇ ಭಾನುವಾರದ ಕರ್ಪ್ಯೂ ಮತ್ತು ಶನಿವಾರ ರಜೆ ಇದೆ. ಈ ಕ್ರಮಗಳಿಂದ ಕೊರೊನಾ ಕಡಿಮೆಯಾಗಲಿದ್ಯಾ ಎಂಬುದನ್ನು ಕಾದು ನೋಡಬೇಕಾಗಿದೆ. ಇಲ್ಲದಿದ್ದರೆ ಮುಂದೇನು ಮಾಡಬೇಕೆಂಬ ನಿರ್ಧಾರವನ್ನು ಸಿಎಂ ಕೈಗೊಳ್ಳುತ್ತಾರೆ ಎಂದರು.