ಬೆಂಗಳೂರು: ನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಪಕ್ಷದ ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆಯಾದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಎಐಸಿಸಿ ವಕ್ತಾರ ಗೌರವ್ ವಲ್ಲಬ್ ಹಾಗೂ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಅವರು ಮುಖಂಡರಿಗೆ ಪಕ್ಷದ ಧ್ವಜ ನೀಡಿ, ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಎಐಸಿಸಿ ವಕ್ತಾರ ಗೌರವ್ ವಲ್ಲಬ್ ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಲ್ಕು ಗ್ಯಾರಂಟಿ ಯೋಜನೆಗಳು ಬಿಜೆಪಿಯ 40% ಕಮಿಷನ್ ಭ್ರಷ್ಟಾಚಾರಕ್ಕಿಂತ ಬಹಳ ಉತ್ತಮ ಎಂದು ಅರಿತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ. ಈ ಚುನಾವಣೆ 4 ಗ್ಯಾರಂಟಿ ಯೋಜನೆ ಹಾಗೂ 40% ಕಮಿಷನ್ ನಡುವಣ ಸಮರ. ಹೀಗಾಗಿ ರಾಜ್ಯದ ಪ್ರಗತಿ, ಕನ್ನಡದ ಅಸ್ಮಿತೆ ಉಳಿಸಲು, ಕರ್ನಾಟಕ ಏಷ್ಯಾದ ಸಿಲಿಕಾನ್ ವ್ಯಾಲಿಯನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಜನರಿಗೆ ಅರಿವಾಗಿದೆ ಎಂದರು.
ಇಂದು ನಮ್ಮ ಜತೆ ಚಿಂತಾಮಣಿಯ ಡಾ. ವಿ. ಅಮರನಾಥ್ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಉಳಿದಂತೆ ಮಹದೇಪುರದಿಂದ ಹುಡಿ ರಾಮಚಂದ್ರ, ಡಾ. ಎಸ್. ಭಾಗ್ಯ, ಅಂಜನಪ್ಪ ಯಾದವ್, ಕೆ. ಎಂ ಮುನಿರಾಜು, ಪರಮೇಶ್ವರ್ ಅವರು ಪಕ್ಷ ಸೇರುತ್ತಿದ್ದಾರೆ. ಆ ಮೂಲಕ 40% ಕಮಿಷನ್ ವಿರುದ್ಧದ ನಮ್ಮ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಖಾಸಗಿ ಸಮಾರಂಭದಲ್ಲಿ ಆತ್ಮೀಯತೆ ಪ್ರದರ್ಶಿಸಿದ ಡಿಕೆಶಿ - ಸಿದ್ದರಾಮಯ್ಯ
ಎಲ್ ಹನುಮಂತಯ್ಯ ಮಾತನಾಡಿ, ಇಂದು ಚಿಂತಾಮಣಿ ಹಾಗೂ ಮಹದೇಪುರ ಕ್ಷೇತ್ರದಿಂದ ಅತ್ಯಂತ ಕ್ರಿಯಾಶೀಲ ನಾಯಕರು ಪಕ್ಷ ಸೇರುತ್ತಿದ್ದಾರೆ. ಅಮರ್ ನನಗೆ ಬಹಳ ವರ್ಷಗಳಿಂದ ಪರಿಚಯವಿರುವ ವ್ಯಕ್ತಿ. ಜನತಾದಳದ ಎಸ್ ಸಿ ಮೋರ್ಚಾದ ಯುವ ಘಟಕ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿ ಪಕ್ಷಕ್ಕೆ ಬಲ ತುಂಬುತ್ತಿದ್ದಾರೆ. ಆ ಮೂಲಕ ನಮ್ಮ ಚಿಂತಾಮಣಿಯ ಅಭ್ಯರ್ಥಿ ಸುಧಾಕರ್ ಎಂಸಿಜಿ, ಅವರ ಗೆಲುವು ಇಂದು ಮತ್ತಷ್ಟು ನಿಶ್ಚಿತವಾಗಿದೆ ಎಂದರು.
ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಿದ್ಧಾಂತ ಒಪ್ಪಿ ರಾಮಚಂದ್ರ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷ ಸೇರುತ್ತಿದ್ದಾರೆ. ಇವರ ಜತೆಗೆ ಡಾ. ಎಸ್. ಭಾಗ್ಯ, ಅಂಜನಪ್ಪ ಯಾದವ್, ಕೆ.ಎಂ ಮುನಿರಾಜು, ಪರಮೇಶ್ವರ್ ಅವರು ಯಾವುದೇ ಆಸೆ ಆಮಿಷಗಳಿಲ್ಲದೇ, ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ. ಇದರಿಂದ ಪಕ್ಷದ ಬಲ ಹೆಚ್ಚಲಿದೆ. ಇಂದು ಕಾಂಗ್ರೆಸ್ ಪಕ್ಷ ರಾಜ್ಯದ ಅನೇಕ ಕ್ಷೇತ್ರಗಳ ನಾಯಕರು ಅದರಲ್ಲೂ ಯುವಕರು ಕಾಂಗ್ರೆಸ್ ಪಕ್ಷ ಬೆಂಬಲಿಸಲು ಮುಂದಾಗಿರುವುದು ಬಹಳ ಉತ್ತಮ ಬೆಳವಣಿಗೆ. ಇಂದು ಪಕ್ಷ ಸೇರುತ್ತಿರುವವರು ಯುವಕರಾಗಿದ್ದು, ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ನನ್ನ ನಾಮಪತ್ರ ತಿರಸ್ಕಾರಕ್ಕೆ ಸಿಎಂ ಕಚೇರಿ, ಬಿಜೆಪಿಯಿಂದ ಷಡ್ಯಂತ್ರ: ಡಿಕೆಶಿ ಆರೋಪ