ಬೆಂಗಳೂರು: ಮೀಸಲಾತಿ ಮಿತಿ ಹೆಚ್ಚಳ ಸಂಬಂಧ ರಾಜ್ಯದ ಬಹುಸಂಖ್ಯಾತ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಹಿತರಕ್ಷಣೆ ಮತ್ತು ಸಂವಿಧಾನದ ನಮ್ಮ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮೀಸಲಾತಿ ಶೇ. 50ಕ್ಕಿಂತ ಹೆಚ್ಚಿಸಿರುವ ಸಂಬಂಧ ಸುಪ್ರೀಂ ಕೋರ್ಟ್ ಆರು ಪ್ರಶ್ನೆಗಳನ್ನು ಎಲ್ಲಾ ರಾಜ್ಯಗಳಿಗೂ ಕೇಳಿದೆ. ಈ ಸಂಬಂಧ ಅಭಿಪ್ರಾಯ ನೀಡುವಂತೆ ತಿಳಿಸಿತ್ತು. ಈ ನಿಟ್ಟಿನಲ್ಲಿ ಕೆ.ಕೆ. ಗೆಸ್ಟ್ ಹೌಸ್‌ನಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ. 50ಕ್ಕೆ ಮೀಸಲಾತಿ ಮಿತಿ ನಿಗದಿ ಮಾಡಲಾಗಿತ್ತು. ಅದನ್ನು ಹೆಚ್ಚಿಸಬೇಕಾ ಬೇಡವಾ? ರಾಜ್ಯ ಸರ್ಕಾರದ ಅಧಿಕಾರವನ್ನು ರಕ್ಷಣೆ ಮಾಡುವ ಸಂಬಂಧ ಸುದೀರ್ಘ ಚರ್ಚೆ ಆಗಿದೆ. ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ್ದೇವೆ ಎಂದರು.
ಕರ್ನಾಟಕ ಮೀಸಲಾತಿ ವಿಚಾರದಲ್ಲಿ ಪ್ರಗತಿಪರ ರಾಜ್ಯ. ಸ್ವಾತಂತ್ರ್ಯ ಪೂರ್ವದಲ್ಲೇ ಕರ್ನಾಟಕದಲ್ಲಿ ಮೀಸಲಾತಿ ಇತ್ತು. ಮಂಡಲ್ ಕಮಿಷನ್ ಬರುವ ಮೊದಲೇ ಹಿಂದುಳಿದ ವರ್ಗಗಳ ಆಯೋಗ ಇದ್ದು, ಮೀಸಲಾತಿ ಇತ್ತು. ಇಲ್ಲಿ ಅದರದೇ ಆದ ಇತಿಹಾಸ ಇದೆ. ಎಲ್ಲಾ ವರ್ಗದ ಆಶೋತ್ತರಗಳು ಹೆಚ್ಚಾಗಿವೆ. ಶೈಕ್ಷಣಿಕ, ಔದ್ಯೋಗಿಕವಾಗಿ ಆಶೋತ್ತರ ಹೆಚ್ಚಾಗಿದೆ. ಈ ಎಲ್ಲದರ ಬಗ್ಗೆ ಸಮಗ್ರ ಚರ್ಚೆ ನಡೆದಿದೆ. ಉತ್ತರದ ಕರಡು ಸಿದ್ಧಪಡಿಸಿ ಅದನ್ನು ಕಳುಹಿಸಿಕೊಡಲಾಗುವುದು. ಕೆಲ ವಿಷಯಗಳ ಬಗ್ಗೆ ಸ್ಪಷ್ಟೀಕರಣ ಕೇಳಲಾಗುವುದು. ನಮ್ಮ ರಾಜ್ಯದ ನಿಲುವನ್ನು ಮಾ. 23ಕ್ಕೆ ಪ್ರಕಟ ಮಾಡಬೇಕು. ಈ ಸಂಬಂಧ ಉಪಯುಕ್ತ ಸಭೆ ಮಾಡಿದ್ದೇವೆ ಎಂದರು.
ಈಗ ಇರುವ ಅವಕಾಶದಲ್ಲಿ ಮೀಸಲಾತಿ ಹೆಚ್ಚಳ ಮಾಡಬಹುದಾ ಎಂದು ಸುದೀರ್ಘ ಚರ್ಚೆ ನಡೆಸಲಾಯಿತು. ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸಿಎಂ ಜೊತೆ ಅಂತಿಮವಾಗಿ ಚರ್ಚಿಸಿ, ಸುಪ್ರೀಂ ಕೋರ್ಟ್ಗೆ ನಮ್ಮ ನಿಲುವನ್ನು ತಿಳಿಸಲಾಗುವುದು ಎಂದರು.