ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಮುಖ್ಯ ಖನಿಜ ಮತ್ತು ಉಪಖನಿಜಗಳ ಗುತ್ತಿಗೆ ಸಂಬಂಧ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಕೇಳಿದ ಪ್ರಶ್ನೆಗೆ ಸಚಿವ ಸಿ.ಸಿ. ಪಾಟೀಲ್ ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಪ್ರತಿಪಕ್ಷದ ಸದಸ್ಯರು ಗದ್ದಲ ನಡೆಸಿದರು.
ವಿಧಾನಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಇಂತಹದ್ದೊಂದು ಸನ್ನಿವೇಶ ಸೃಷ್ಟಿಯಾಯಿತು. ಸಚಿವ ಸಿ.ಸಿ. ಪಾಟೀಲ್ ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂದು ಪ್ರತಿಪಕ್ಷ ಸದಸ್ಯರು ಖಂಡಿಸಿದಾಗ, ಆಡಳಿತ ಪಕ್ಷ ಸದಸ್ಯರು ಕೂಡ ಸಚಿವರ ಬೆಂಬಲಕ್ಕೆ ನಿಂತು ಆಕ್ರೋಶ ಹೊರಹಾಕಿದರು. ಆಡಳಿತ ಪಕ್ಷದ ಪರ ನಾರಾಯಣಸ್ವಾಮಿ ಸೇರಿದಂತೆ ಹಲವು ಸದಸ್ಯರು ವಾದ ಮಾಡಿದ್ರೆ, ಪ್ರತಿಪಕ್ಷವಾದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಪ್ರತಿಯಾಗಿ ವಾಗ್ವಾದ ನಡೆಸಿದರು.
ಕಲಾಪದಲ್ಲಿ ಹತ್ತು ನಿಮಿಷಕ್ಕೂ ಹೆಚ್ಚು ಸಮಯ ವಾಗ್ವಾದ ನಡೆಯಿತು. ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಸದಸ್ಯರು ಗದ್ದಲಕ್ಕೆ ಬೇಸರ ವ್ಯಕ್ತಪಡಿಸಿದರು. ಪ್ರಶ್ನೋತ್ತರ ಅವಧಿ ಮುಂದುವರೆಯಿತು. ಬಸವರಾಜ ಹೊರಟ್ಟಿ ಅವರು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಪಟ್ಟಣ ಹಾಗೂ ಪಂಚಾಯಿತಿಗಳಿಗೆ ಚುನಾವಣೆ ನಡೆದು ಪ್ರಕಟವಾಗಿರುವ ಸಂಬಂಧ ಮಾಹಿತಿ ಕೇಳಿದರು. ಇದಕ್ಕೆ ಸಚಿವ ನಾರಾಯಣಗೌಡರು ಉತ್ತರಿಸಿದರು. ಆದರೆ ಇದಕ್ಕೆ ಸಾಕಷ್ಡು ಗೊಂದಲ ಇರುವ ಹಿನ್ನೆಲೆ ಇನ್ನಷ್ಟು ಮಾಹಿತಿ ತರಿಸಿ ವಿವರ ನೀಡುತ್ತೇನೆ ಎಂದರು.
ಆಡಳಿತ, ಪ್ರತಿಪಕ್ಷ ಸದಸ್ಯರು ಕೇಳಿದ ಸ್ಥಳೀಯ ಸಮಸ್ಯೆಗಳಿಗೆ ಸಚಿವರಾದ ನಾರಾಯಣಗೌಡ, ಬೈರತಿ ಬಸವರಾಜು, ಎಸ್.ಟಿ. ಸೋಮಶೇಖರ್ ಮತ್ತಿತರ ಸಚಿವರು ಉತ್ತರ ನೀಡಿದರು. ಆದರೆ, ಹಲವು ಸಚಿವರಿಂದ ಸೂಕ್ತ ಉತ್ತರ ಸಿಗದ ಹಿನ್ನೆಲೆ ಪ್ರತಿಪಕ್ಷ ಸದಸ್ಯರು ಸಚಿವರು ಸೂಕ್ತ ಉತ್ತರ ನೀಡುತ್ತಿಲ್ಲ ಎಂದರು.
ಭಾರತ ದರ್ಶನ : ಎಪಿಎಂಸಿ ವತಿಯಿಂದ ನಿರ್ವಹಿಸುತ್ತಿರುವ ಕಾರ್ಯಕ್ರಮ ಭಾರತ ದರ್ಶನ ಅಧ್ಯಯನ ಪ್ರವಾಸ ಸದ್ಯ ಕೊರೊನಾ ಭೀತಿ ಹಿನ್ನೆಲೆ ನಿಂತಿದೆ. ಇದು ತಿಳಿಯಾದ ಬಳಿಕ ಮತ್ತೆ ಕಾರ್ಯಕ್ರಮ ಆರಂಭಿಸುತ್ತೇನೆ ಎಂದು ಸದಸ್ಯ ಕೆ. ಹರೀಶ್ ಕುಮಾರ್ ಪ್ರಶ್ನೆಗೆ ಸಚಿವ ಎಸ್.ಟಿ. ಸೋಮಶೇಖರ್ ಉತ್ತರಿಸಿದರು. ಚುಕ್ಕೆ ಗುರ್ತಿನ ಪ್ರಶ್ನೆಗಳಿಗೆ ಉತ್ತರ ನೀಡಿದ ನಂತರ ಚುಕ್ಕೆ ರಹಿತ ಪ್ರಶ್ನೆಗಳ ಉತ್ತರ ಸದನದಲ್ಲಿ ಮಂಡಿಸಲಾಯಿತು.