ಬೆಂಗಳೂರು : ಖಾಸಗಿ ಶಾಲೆಗಳು ಇದೀಗ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವರ್ಗಾವಣೆ ಪತ್ರಗಳನ್ನು(TC) ಬಿಇಒ ಕಚೇರಿಗಳಲ್ಲಿ ಪಡೆಯಬಹುದು ಅಂತಾ ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳ ವರ್ಗಾವಣೆ ಪತ್ರದ ವಿಚಾರವಾಗಿ ಪೋಷಕರು ಶಾಲೆಗಳಿಗೆ ಹೋಗುವ ಅಗತ್ಯವಿಲ್ಲ ಎಂದಿದ್ದಾರೆ. ಹೀಗಾಗಿ, ಈ ಹೇಳಿಕೆಗೆ ಇದೀಗ ತೀವ್ರ ಖಂಡನೆ ವ್ಯಕ್ತವಾಗಿದೆ. ಖಾಸಗಿ ಶಾಲೆಗಳು ಸಹ ವಿರೋಧ ವ್ಯಕ್ತಪಡಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನೇರವಾಗಿ ಬಿಇಒ ಕಚೇರಿಯಲ್ಲೇ ಟಿಸಿ ಪಡೆಯುವುದರ ಕುರಿತು ಪ್ರಸ್ತಾಪ ಮಾಡಿದ್ದಾರೆ. ಇದು ಒಪ್ಪುವ ವಿಚಾರವಲ್ಲ. ಇದನ್ನು ಪೋಷಕರು ದುರುಪಯೋಗ ಮಾಡಿಕೊಳ್ಳುತ್ತಾರೆ. ಹಳೆಯ 2-3 ವರ್ಷದ ಶುಲ್ಕವನ್ನ ಬಾಕಿ ಇಟ್ಟಕೊಂಡಿದ್ದು, ಅದನ್ನ ಪಾವತಿಸಿಲ್ಲ. ಅಂತಹವರಿಗೆ ಇಲಾಖೆ ಪುಷ್ಟಿಕೊಟ್ಟು ವಂಚಿಸುವವರಿಗೆ ಉತ್ತೇಜನ ಕೊಡುವ ಕ್ರಮವಾಗಿದೆ ಎಂದಿದ್ದಾರೆ.
ಶಿಕ್ಷಣ ಇಲಾಖೆಗೆ ಪ್ರಜ್ಞೆ ಇದ್ಯಾ? ಶಿಕ್ಷಣ ಸಂಸ್ಥೆಗಳನ್ನ ಉಳಿಸಬೇಕು ಅಂತಾ ಇದ್ದೀರಾ ಅಥವಾ ಹಾಳು ಮಾಡಬೇಕು ಅಂತಾ ಇದ್ದೀರಾ ಎಂದು ಖಾರವಾಗಿಯೇ ಕಿಡಿಕಾರಿದ್ದಾರೆ. ಶಿಕ್ಷಣ ಸಚಿವರು ಇದರ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಶಾಲಾ ಬಾಗಿಲು ಮುಚ್ಚಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೂಪ್ಸಾದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತಾನಾಡಿ, ಪೋಷಕರ ಮತ್ತು ಆಡಳಿತ ಮಂಡಳಿಗಳ ಮಧ್ಯೆ ಮತ್ತೊಂದು ಸಂಘರ್ಷ ಏರ್ಪಡಿಸುವ ಹೇಳಿಕೆ ಇದಾಗಿದೆ. ಬಿಇಒ ಅಧಿಕಾರಿಗಳೇ ಟಿಸಿ ಕೊಡುವುದಾದರೆ ನಂತರ ಸ್ಟಡಿ ಸರ್ಟಿಫಿಕೇಟ್, ಮಾರ್ಕ್ಸ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಯಾರು ಕೊಡುತ್ತಾರೆ? ಈ ರೀತಿಯ ಅನೇಕ ಸಮಸ್ಯೆಗಳು ಮುಂದೆ ಪ್ರಾರಂಭವಾಗಲು ಇಂತಹ ಹೇಳಿಕೆಗಳೇ ಕಾರಣವಾಗಲಿದೆ ಎಂದಿದ್ದಾರೆ.
ಟಿಸಿ ನಿರಾಕರಿಸುವ ಅಧಿಕಾರ ಶಾಲಾ ಮುಖ್ಯಸ್ಥರಿಗೆ ಇರುವುದಿಲ್ಲ. ಆದರೂ ಕಳೆದ ವರ್ಷ ಶಿಕ್ಷಣ ಮಂತ್ರಿಗಳು, ಇಲಾಖೆ ಅಧಿಕಾರಿಗಳು ಶುಲ್ಕದ ವಿಚಾರವಾಗಿ ಗೊಂದಲದ ಹೇಳಿಕೆ ನೀಡಿ ಶುಲ್ಕ ಕಟ್ಟುವಂತಹ ಪೋಷಕರನ್ನೂ ತಪ್ಪುದಾರಿಗೆ ಎಳೆಯಲಾಗಿದೆ. ಇದೀಗ ಟಿಸಿ ವಿಚಾರವಾಗಿಯೂ ಅಂತಹದ್ದೇ ಸಮಸ್ಯೆ ಹುಟ್ಟು ಹಾಕುವ ಹೇಳಿಕೆ ಸರ್ಕಾರಕ್ಕೂ ಹಾಗೂ ಖಾಸಗಿ ಶಾಲೆಗಳ ಮಧ್ಯ ಸಂಘರ್ಷಕ್ಕೆ ಕಾರಣ ಆಗುತ್ತೆ ಎಂದಿದ್ದಾರೆ.
ಓದಿ: ಟಿಬೆಟಿಯನ್ ಯುವಕರಿಗೆ ಚೀನಾ ಪ್ರೋತ್ಸಾಹ.. ಭಾರತದ ಮೇಲೆ ಡ್ರ್ಯಾಗನ್ ರಾಷ್ಟ್ರದ ವಕ್ರದೃಷ್ಟಿ..