ಬೆಂಗಳೂರು: ಕೋವಿಡ್ ಸಂಕಷ್ಟದ ನಡುವೆ ಹೆಚ್ಚಿನ ಬಡಾವಣೆಗಳಿಗೆ ಮೂಲಸೌಕರ್ಯ ಸೌಲಭ್ಯವನ್ನೂ ಕೊಡದ ಬಿಡಿಎ ಖಾತಾ ವರ್ಗಾವಣೆ ಶುಲ್ಕ, ಅರ್ಜಿ ಶುಲ್ಕ, ನೋಂದಣಿ ಶುಲ್ಕ, ಖಾಲಿ ನಿವೇಶನದ ದಂಡ ಹಾಗೂ ನಿರ್ವಹಣಾ ಶುಲ್ಕ ವಸೂಲಿಗೆ ಮುಂದಾಗಿದೆ.
ಇದರಿಂದ ಬಿಡಿಎ ನಿವೇಶನಗಳ ಫಲಾನುಭವಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಸ್ತಿ ತೆರಿಗೆ ಹಾಗೂ ನಿರ್ವಹಣಾ ಶುಲ್ಕವನ್ನು 2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಜಾರಿಗೆ ತಂದಿದೆ. ಇದು ಬಿಡಿಎ ವೆಬ್ಸೈಟ್ನಲ್ಲಿ ಆಸ್ತಿ ತೆರಿಗೆಗೆ ಸಂಬಂಧಿಸಿದ ಪಟ್ಟಿಯಲ್ಲೂ ಪರಿಷ್ಕೃತ ದರ ಅಳವಡಿಸಲಾಗಿದ್ದು, ನಿವೇಶನದಾರರು ಈ ಸಾಲಿನಿಂದಲೇ ಆಸ್ತಿ ತೆರಿಗೆ ಹೆಚ್ಚಳದ ಹೊರೆ ಹೊರಬೇಕಿದೆ.
ಖಾತಾ ಶುಲ್ಕ ಪರಿಷ್ಕರಣೆ
ನಿವೇಶನ ವಿಸ್ತೀರ್ಣ | ಈಗಿನ ದರ | ಪರಿಷ್ಕೃತ |
20×30 ಅಡಿ | 500 ರೂ. | 1 ಸಾವಿರ ರೂ. |
30×40 | 2 ಸಾವಿರ | 4 ಸಾವಿರ |
40x60 | 5 ಸಾವಿರ | 10ಸಾವಿರ |
50×80 | 10 ಸಾವಿರ | 20 ಸಾವಿರ |
50×80 | 15 ಸಾವಿರ | 30 ಸಾವಿರ |
ನಿರ್ವಹಣಾ ಶುಲ್ಕ | ನಿವೇಶನ ವಿಸ್ತೀರ್ಣ | ಪರಿಷ್ಕೃತ |
20×30 | 600 | 1200 |
30×40 | 600-1200 | 1800 |
40×60 | 1200-2400 | 2400 |
50×80 | 2400-4000 | 3000 |
50×80 | 4000 | 3600 |
ನಾಡಪ್ರಭು ಕೆಂಪೇಗೌಡ ಬಡಾವಣೆ ಪ್ರಗತಿಪರ ವೇದಿಕೆಯ ಶ್ಯಾಮ್ ಜುಜಾರೆ ಮಾತನಾಡಿ, ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್ ಸಂಪರ್ಕ, ಆಟದ ಮೈದಾನ, ಉದ್ಯಾನದ ಮೂಲಸೌಕರ್ಯ ವ್ಯವಸ್ಥೆಗಳೇ ಇಲ್ಲ. ಆದರೂ ನಿರ್ವಹಣಾ ಶುಲ್ಕ ಹೇಗೆ ಹಾಕಲು ಸಾಧ್ಯ.
ಮೂಲ ಸೌಕರ್ಯಗಳಿಲ್ಲದೇ ಕಟ್ಟಡ ಕಟ್ಟಲೂ ಸಾಧ್ಯವಾಗುತ್ತಿಲ್ಲ. ಹೀಗಿರುವ ಸ್ಥಿತಿಯಲ್ಲಿ, ಕೋವಿಡ್ ಸಮಯದಲ್ಲಿ ಮತ್ತೆ ಶುಲ್ಕ ಹಾಕುತ್ತಿರುವುದು ಬರೆ ಹಾಕಿದಂತಾಗಿದೆ. ಇಷ್ಟೂ ಸೌಕರ್ಯವಿಲ್ಲದ ಕೆಂಪೇಗೌಡ ಬಡಾವಣೆಯನ್ನೂ ಸಹ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಪೆರಿಕಲ್ ಎಂ.ಸುಂದರ್ ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಬಿಡಿಎ ಪ್ರಸ್ತಾಪಿಸಿರುವ ನಿವೇಶನ ಮತ್ತು ಪ್ಲಾಟ್ ಖರೀದಿಗೆ ಸಂಬಂಧಿಸಿದ ಹಲವು ಶುಲ್ಕ ಹೆಚ್ಚಿಸಿರುವ ಬಗ್ಗೆ ಗಮನಕ್ಕೆ ತಂದು ಮನವಿ ಪತ್ರವನ್ನು ನೀಡಿದರು.
ಕೋವಿಡ್-19 ಸಾಂಕ್ರಾಮಿಕ ರೋಗ 2ನೇ ಅಲೆಯಿಂದಾಗಿ ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ಮಧ್ಯಮ ವರ್ಗದವರು ಹಾಗೂ ಜನಸಾಮಾನ್ಯರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಈ ಸಮಯದಲ್ಲಿ ಬಿಡಿಎ ಪ್ರಸ್ತಾಪಿಸಿರುವ ಉದ್ದೇಶಿತ ಶುಲ್ಕ ಹೆಚ್ಚಳವನ್ನು ಹಿಂತೆಗೆದುಕೊಳ್ಳಬೇಕೆಂದು ಮರು ಪರಿಶೀಲಿಸಬೇಕೆಂದು ಮನವಿ ಮಾಡಿದರು.