ಬೆಂಗಳೂರು: ಪುನೀತ್ ರಾಜಕುಮಾರ್ ನುಡಿ ನಮನಕ್ಕೆ ಬಂದಿದ್ದಾಗ ಶಿವರಾಮ್ ಅವರನ್ನು ಭೇಟಿಯಾಗಿದ್ದೆ. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಬನಶಂಕರಿ 2ನೇ ಹಂತದಲ್ಲಿರುವ ಹಿರಿಯ ನಟ ದಿವಂಗತ ಎಸ್. ಶಿವರಾಂ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಶಿವರಾಮ್ ಕನ್ನಡ ಚಿತ್ರರಂಗ ಕಂಡ ಉತ್ತಮ ಹಾಸ್ಯ ನಟ. ನಾನು ಬಹಳ ವರ್ಷಗಳ ಹಿಂದೆ ಶರಪಂಜರ ಸಿನಿಮಾ ನೋಡಿದ್ದೆ. ಶರಪಂಜರ, ಎಡಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿ ಉತ್ತಮವಾಗಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಸ್ಥಾನವನ್ನು ತುಂಬಲು ಬೇರೆಯವರಿಂದ ಸಾಧ್ಯವಿಲ್ಲ ಎಂದರು.
ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಇಂದು ಶಿವರಾಮ್ ಅಗಲಿಕೆ ಸಹ ದೊಡ್ಡ ಅಘಾತವಾಗಿದೆ. ಅವರ ಕುಟುಂಬಕ್ಕೆ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.
ಇದೇ ವೇಳೆ ಶಿವರಾಮ್ ಅಂತಿಮ ದರ್ಶನ ಪಡೆದು ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ನಾನು ಸಿನಿ ಪಯಣ ಶುರು ಮಾಡಿದಾಗ ನನ್ನ ಜೊತೆ ಇದ್ದರು. ಅವರೊಬ್ಬ ದೊಡ್ಡ ಜ್ಞಾನಿ, ಅವರಿಂದ ಕಲಿಯುವುದು ಬಹಳ ಇತ್ತು. ಅವರ ಸಾವು ನೋವು ತಂದಿದೆ. ಶಿವರಾಮಣ್ಣರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಇದನ್ನೂ ಓದಿ: ಶಿವರಾಮಣ್ಣನ ಅಂತಿಮ ದರ್ಶನ ಪಡೆದ ಸಿಎಂ: ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಹಿರಿಯ ನಟನ ಅಂತ್ಯಕ್ರಿಯೆ