ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಎಂದು ಭೋಜನ ವಿರಾಮದ ನಂತರವೂ ಬಜೆಟ್ ಮೇಲಿನ ಚರ್ಚೆ ಮುಂದುವರಿಯಿತು. ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಹಲವಾರು ವಿಚಾರದ ಬಗ್ಗೆ ಪ್ರಶ್ನೆ ಮಾಡಿದರು.
ವಿರಾಮಕ್ಕೆ ಮುನ್ನ ಮಾತು ಆರಂಭಿಸಿದ್ದ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಮುಂದುವರಿಸಿ, ಈ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆಗಳನ್ನ ಘೋಷಣೆ ಮಾಡಿಲ್ಲ. ಲಿಂಗಾಯಿತ, ಒಕ್ಕಲಿಗ ಸೇರಿದಂತೆ ಕೆಲ ಜಾತಿಯವರಿಗೆ ನಿಗಮ ಮಂಡಳಿ ಮಾಡಿದ್ದೀರಿ. ಬೇರೆ ಸಣ್ಣಪುಟ್ಟ ಜಾತಿಯವರು ಏನ್ ಮಾಡಬೇಕು. ಹಿಂದುಳಿದ ವರ್ಗಗಳ ಸೇರಿದಂತೆ ಸಣ್ಣಪುಟ್ಟ ಜಾತಿಗಳಿಗೆ ನಿಗಮ ಮಂಡಳಿ ಮಾಡಿ. ಅಂತಹ ಜಾತಿಗಳಲ್ಲಿ ಬಡವರು ಹೆಚ್ಚಾಗಿದ್ದಾರೆ. ನಿಮ್ಮ ಪಕ್ಷದ ಸಂಸದ ಒಬ್ಬರು ಈ ಬಜೆಟ್ ಸರಿಯಿಲ್ಲ, ಇದೊಂದು ಕಪ್ಪು ಚುಕ್ಕೆ ಅಂತ ಹೇಳಿದ್ದಾರೆ. ಇನ್ನು ನಾವು ಏನ್ ಈ ಬಜೆಟ್ ಬಗ್ಗೆ ಹೇಳೊದು? ವಿಪಕ್ಷವಾಗಿ ನಾವು ಈ ಬಜೆಟ್ ಸರಿಯಲ್ಲ ಅಂತ ಹೇಳ್ತಿವಿ. ಆದ್ರೆ ನಿಮ್ಮ ಪಕ್ಷದವರೇ ಬಜೆಟ್ ಸರಿಯಿಲ್ಲ ಅಂತ ಹೇಳ್ತಾಯಿದ್ದಾರೆ ಈಗ ಏನ್ ಹೇಳ್ತೀರಿ? ಎಂದು ಹೇಳಿದರು.
ಬೆಂಗಳೂರು ಏರ್ಪೋರ್ಟ್ನಲ್ಲಿ ಕನ್ನಡಕ್ಕೆ ಬೆಲೆಯಿಲ್ಲ. ಬೇರೆ ಬೇರೆ ಕಡೆಗಳಿಂದ ಸಾವಿರಾರು ಜನರು ಬರ್ತಾರೆ. ಕೆಲವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ. ಅವರಿಗೆಲ್ಲ ಅನುಕೂಲವಾಗುತ್ತೆ ಹಾಗಾಗಿ ಕನ್ನಡ ಡಿಸ್‌ಪ್ಲೇ ಮಾಡಿ, ಅನುಕೂಲ ಜೊತೆಗೆ ನಮ್ಮ ಭಾಷೆಗೆ ಗೌರವ ಸಹ ಬರುತ್ತೆ. ಇದು ನಮ್ಮಲ್ಲಿ ಮಾತ್ರ ದೇಶದ ಇತರೆ ನಗರಗಳಲ್ಲಿ ಈ ರೀತಿಯಾಗಿಲ್ಲ. ಬೆಂಗಳೂರಿನ ಏರ್ ಪೋಟ್೯ನಲ್ಲಿ ಮಾತ್ರ ಹೀಗೆ ಏಕೆ ಅಂತ ಗೊತ್ತಿಲ್ಲ ದಯವಿಟ್ಟು ಇದನ್ನ ಸರಿಪಡಿಸಿ ಎಂದರು.
ಬಿಡಿಎ ಹಾಗೂ ಜಲಮಂಡಳಿಗಳು ಬೆಂಗಳೂರು ಅಭಿವೃದ್ಧಿಗೆ ಮಾರಕ ಅಂತ ಹೇಳಬಹುದು. ಏಕೆಂದರೆ ಒಂದಕ್ಕೊಂದು ಸಮನ್ವಯತೆ ಇಲ್ಲ. ಬಿಡಿಎ ರಸ್ತೆ ಮಾಡಿದರೆ ಜಲಮಂಡಳಿ ರಸ್ತೆ ಆಗೆಯುತ್ತದೆ. ಆ ಕಾಮಗಾರಿ ಮುಗಿಯೊಕ್ಕೆ 6 ತಿಂಗಳು ಬೇಕು. ಹೀಗೆ ನೂರಾರು ಇವೆ ಇವುಗಳನ್ನ ಸರಿಮಾಡುವ ಕೆಲಸ ಆಗಬೇಕು. ಸುವರ್ಣ ಸೌಧ ಅಂತ ಇದೆ. ಉ.ಕರ್ನಾಟಕ ಭಾಗದ ಜನರ ದೊಡ್ಡ ಕನಸು ಅದು. ಆದ್ರೆ ಏನ್ ಪ್ರಯೋಜನ ಅಲ್ಲಿ ಅಧಿವೇಶನ ನಡಿಯುತ್ತಿಲ್ಲ ಹಾಗಾದ್ರೆ. ಅಲ್ಲಿ ದೊಡ್ಡದಾದ ಕಟ್ಟಡ ನಿರ್ಮಾಣ ಮಾಡಿ ಏನ್ ಪ್ರಯೋಜನ? ಸುಮ್ನೆ ಶೋಗೆ ಮಾಡಿದ್ದೀರಾ, ನಮಗೆ ಗೊತ್ತಿದೆ. ಭಯ ಪಟ್ಕೊಂಡು ನೀವು ಅಧಿವೇಶನ ಮಾಡ್ತಾಯಿಲ್ಲ. ನಾವು ನಿಮ್ಮ ಪರವಾಗಿ ಇದ್ದೀವಿ ಅಧಿವೇಶನ ಮಾಡಿ. ಈ ವೇಳೆ ಸಭಾ ನಾಯಕ ಮಧ್ಯ ಪ್ರವೇಶ ಮಾಡಿ ಭಯದಿಂದ ಅಧಿವೇಶನ ನಡೆಸಿಲ್ಲ ಅನ್ನೊದು ತಪ್ಪು ಎಂದರು.
ದಯವಿಟ್ಟು ಈ ಮಾತು ವಾಪಸ್ ತೆಗೆದುಕೊಳ್ಳುವಂತೆ ಕೋಟಾ ಶ್ರೀನಿವಾಸ್ ಪೂಜರಿ ಒತ್ತಾಯಿಸಿದರು. ಅದಕ್ಕೆ ಯುಬಿ ವೆಂಕಟೇಶ ನಾನು ಹೇಳ್ತಾ ಇರೊದ್ ನಿಜ. ನೀವು ಭಯ ಬಿದ್ದು ಅಧಿವೇಶನ ಮಾಡ್ತಾಯಿಲ್ಲ. ಕೋವಿಡ್ , ನೆರೆ ಇವು ಕೇವಲ ನೆಪ ಅಷ್ಟೇ ಎಂದು ಹೇಳಿದರು.
ಪೆಟ್ರೋಲ್ ಮೇಲಿನ ತೆರಿಗೆ ಇಳಿಸಿ
ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಅನ್ಯ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಿ 5 ರೂ.ವರೆಗೂ ಕಡಿಮೆ ಮಾಡಿದ್ದಾರೆ. ಕರ್ನಾಟಕ ಯಾಕೆ ಈ ನಿಟ್ಟಿನಲ್ಲಿ ಯೋಚಿಸಬಾರದು. ಬಡವರ ಮೇಲಿನ ಹೊರೆ ಕಡಿಮೆ ಮಾಡಬೇಕು. ಇಂಧನ ಹಾಗೂ ಅಡುಗೆ ಅನಿಲ ಹೆಚ್ಚಳ ಹಿನ್ನೆಲೆ ಪೂರಕ ಹಾಗೂ ಅವಲಂಬಿತ ಕ್ಷೇತ್ರಗಳ ಬೆಲೆ ಹೆಚ್ಚಾಗಿದೆ. ಟ್ಯಾಕ್ಸಿ ಚಾಲಕರು ಬದುಕು ನಿರ್ವಹಿಸಲಾಗದೇ ಚಾಲನಾ ವೃತ್ತಿ ಬಿಟ್ಟು ಬೇರೆ ಕಸುಬು ನೋಡಿಕೊಳ್ಳುತ್ತಿದ್ದಾರೆ. ಸರ್ಕಾರ ಬಡ ಜನರನ್ನು ಕಾಪಾಡುವ ಕಾರ್ಯ ಮಾಡಬೇಕು. ಅಬಕಾರಿ ಸುಂಕ ಇಳಿಸಿ. ಜಿಎಸ್ಟಿ ತರುವುದರಿಂದ ರಾಜ್ಯಗಳ ಮೇಲೆ ಹೊರೆ ಹೆಚ್ಚಾಗಲಿದೆ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳದಿದ್ದರೆ ಮುಂದೆ ಕೇಂದ್ರ, ರಾಜ್ಯ ಸರ್ಕಾರಗಳು ಬಾಧೆ ಅನುಭವಿಸಬೇಕಾಗುತ್ತದೆ.
ಈ ಬಜೆಟ್ನಲ್ಲಿ ಅನುದಾನವನ್ನು ಹಲವು ಕ್ಷೇತ್ರಕ್ಕೆ ಕಡಿತ ಮಾಡಲಾಗಿದೆ. ಕೃಷಿ ವಲಯಕ್ಕೆ ಈ ಸಾರಿ 12 ಸಾವಿರ ಕೋಟಿ ರೂ. ಖೋತಾ ಆಗಿದೆ. ಕೆಲ ಇಲಾಖೆಗಳಿಗೆ, ಹೊಸ ಯೋಜನೆಗಳಿಗೆ ಮೀಸಲಿಡುವ ಮೊತ್ತ ಕಡಿಮೆ ಮಾಡಬಹುದಿತ್ತು. ಆದ್ಯತೆಯ ಕೃಷಿ ವಲಯಕ್ಕೆ ಕಡಿಮೆ ಮಾಡಬಾರದಿತ್ತು. ರಾಜ್ಯದಲ್ಲಿ ಎದುರಾಗಿರುವ ವಿತ್ತೀಯ ಕೊರತೆ ನಿವಾರಣೆಗೆ ಯಾವ ಕ್ರಮ ಕೈಗೊಳ್ಳುತ್ತೀರಿ? ಕೇಂದ್ರದ ಸೆಸ್ ಸಂಗ್ರಹ ವಿಚಾರ ಹೇಗೆ? ಕೇಂದ್ರ ಸರ್ಕಾರ ದಿವಾಳಿಯಾದರೆ ಜಿಎಸ್ಟಿ ಪಾಲು ಸಿಗಲ್ಲ. ರಾಜ್ಯ ಮುನ್ನಡೆಸುವ ಉದ್ದೇಶದಿಂದ ಸಂಪನ್ಮೂಲ ಕ್ರೋಢೀಕರಣ ಮಾಡಬೇಕು ಎಂದರು.