ಬೆಂಗಳೂರು: ವಿಧಾನ ಪರಿಷತ್ನಲ್ಲಿ ಎಲ್ಲ ಕಲಾಪಗಳನ್ನು ಬದಿಗೊತ್ತಿ ಸಿಡಿ ಹಗರಣ ಸಂಬಂಧ ಚರ್ಚೆಗೆ ಪಟ್ಟು ಹಿಡಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ, ಶೂನ್ಯ ವೇಳೆ ಕಲಾಪ ಮುಗಿಯುತ್ತಿದ್ದಂತೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಿಡಿ ವಿಷಯವನ್ನು ಪ್ರಸ್ತಾಪಿಸಿದರು. ಮಾರ್ಚ್ 22 ರಂದು ನೀಡಿದ್ದ ನೋಟಿಸ್ ನಡಿ ಚರ್ಚೆಗೆ ಅವಕಾಶ ಕೋರಿದರು. ಎಲ್ಲ ಕಲಾಪ ಬದಿಗೊತ್ತಿ ಸಿಡಿ ವಿಷಯ ಕೈಗೆತ್ತಿಕೊಳ್ಳಬೇಕು. ನಮಗೆ ಇನ್ನು ಕಾಯಲು ಸಾಧ್ಯವಿಲ್ಲ ಎಂದರು.
ಆಗ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಕ್ಷದ ಪ್ರಸ್ತಾಪಕ್ಕೆ ಅನುಮತಿ ನಿರಾಕರಿಸಿದರು. ಅಜೆಂಡಾದಲ್ಲಿ ಬಂದಿದೆ. ಆಗ ಮಾತನಾಡಿ ಈಗೇಕೆ ಪ್ರಶ್ನೆ ಮಾಡುತ್ತಿದ್ದೀರಿ, ನಿಯಮ 68 ಕ್ಕೆ ಒಪ್ಪಿಕೊಂಡಿದ್ದೀರಿ ಅಜೆಂಡಾದಲ್ಲಿ ಇದೆ ಆಗ ಮಾತನಾಡಿ, ಅಜೆಂಡಾದಂತೆ ಹೋಗೋಣ ಎಂದು ಸಭಾಪತಿಗಳು ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರ ಅಭಿಪ್ರಾಯ ಕೋರಿದರು.
ಓದಿ: ಸದನದಲ್ಲಿ ಮುಂದುವರೆದ ‘ಸಿಡಿ’ ವಾರ್.. ‘ಬ್ಲ್ಯೂ ಬಾಯ್ಸ್’ ಎಂದು ಧಿಕ್ಕಾರ ಕೂಗಿದ ವಿಪಕ್ಷ ಸದಸ್ಯರು
ಸಿಡಿ ವಿಷಯದ ಚರ್ಚೆಗೆ ಬರಲ್ಲ ಎಂದಿದ್ದೆವು. ಆದರೂ ಅದನ್ನು ಸ್ವೀಕರಿಸಿ ಅಜೆಂಡಾದಲ್ಲಿ ಹಾಕಲಾಗಿದೆ. ನಾವು ಅನಿವಾರ್ಯವಾಗಿ ಒಪ್ಪಿದ್ದೇವೆ. ಈಗ ಅಜೆಂಡಾದಂತೆ ಹೋಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಸಭಾಪತಿಗಳು ಅಜೆಂಡಾದಂತೆ ವಿತ್ತೀಯ ಕಲಾಪ ಕೈಗೆತ್ತಿಕೊಂಡರು. ಬಜೆಟ್ ಮೇಲಿನ ಭಾಷಣಕ್ಕೆ ಅವಕಾಶ ಕಲ್ಪಿಸಿದರು. ಸಭಾಪತಿಗಳ ನಿರ್ಣಯ ವಿರೋಧಿಸಿದ ಕಾಂಗ್ರೆಸ್ ಸದಸ್ಯರು ಸಿಡಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.
ಅಜೆಂಡಾದಂತೆ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಧರಣಿ ಕೈ ಬಿಡಿ ಎಂದು ಸಭಾಪತಿ ಪದೇ ಪದೆ ಮನವಿ ಮಾಡಿದರೂ ಕೇಳದ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಲಾಪ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿದರು.