ಬೆಂಗಳೂರು: ದೇಶದಲ್ಲಿ ಪ್ರತಿಪಕ್ಷಗಳ ನಾಯಕರು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಯಾರಾದರೂ ಏನಾದರೂ ಮಾತನಾಡಿದ್ರೆ ತನಿಖಾ ಸಂಸ್ಥೆಗಳಿಂದ ನೋಟಿಸ್ ಬರುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗೋವಾ, ಅರುಣಾಚಲ ಪ್ರದೇಶದಲ್ಲಿ ಏನೇನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ. ಹಾಲಿ ಸರ್ಕಾರಗಳನ್ನು ಬೀಳಿಸುವ ಕೆಲಸ ಪ್ರಜಾಪ್ರಭುತ್ವ ವಿರೋಧಿ ಆಗಿದೆ. ಬಿಜೆಪಿಯು ರಾಜ್ಯಗಳಲ್ಲಿ ಬೇರೆ ಸರ್ಕಾರಗಳನ್ನು ಉರುಳಿಸುವ ಕೆಲಸ ಮಾಡ್ತಿರೋದು ಸಮ್ಮತವಲ್ಲ ಎಂದು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಮತಯಾಚನೆಯ ಬಳಿಕ ಅವರು ಮಾತನಾಡಿದರು. ಎರಡು ದಿನಗಳ ಹಿಂದೆ ನೂಪುರ್ ಶರ್ಮಾ ಬಗ್ಗೆ ಸುಪ್ರೀಂಕೋರ್ಟ್ ಕೆಲವು ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಾಂಗವು ಸಂವಿಧಾನಕ್ಕೆ ಉತ್ತರದಾಯಿ ಆಗಿರಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ನ ಅಭಿಪ್ರಾಯವನ್ನು ನಾವು ಸ್ವಾಗತಿಸುತ್ತೇವೆ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಸುಪ್ರೀಂಕೋರ್ಟ್ನ ಸೂಚನೆ ಬಗ್ಗೆ ಟೀಕೆ ಟಿಪ್ಪಣಿ ಮಾಡಲಾಗ್ತಿದೆ. ನ್ಯಾಯಾಂಗದ ಮೇಲಿನ ಇಂತಹ ಟೀಕೆ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಆತಂಕ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ತಮಗೆ ಅನುಕೂಲಕರ ತೀರ್ಪು ಕೊಟ್ರೆ ಸಂಭ್ರಮ ಪಡ್ತಾರೆ. ಆದರೆ ತಮಗೆ ಬೇಡವಾದ ತೀರ್ಪು, ಅಭಿಮತ ಬಂದ್ರೆ ತೆಗಳುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕರಿ ಕೂಡ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ತಿದೆ. ಇಡಿ, ಸಿಬಿಐ, ಐಟಿ ದುರ್ಬಳಕೆ ಆಗ್ತಿವೆ. ದೇಶಕ್ಕೆ ಮಾತನಾಡುವ ರಾಷ್ಟ್ರಪತಿ ಬೇಕು. ದೇಶಕ್ಕೆ ಮೌನಿಯಾಗಿರುವ ರಾಷ್ಟ್ರಪತಿ ಅಥವಾ ರಬ್ಬರ್ ಸ್ಟಾಂಪ್ ರಾಷ್ಟ್ರಪತಿಯ ಅಗತ್ಯ ಇಲ್ಲ ಎಂದು ಸಿನ್ಹಾ ಹೇಳಿದರು.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಮತಯಾಚಿಸಿದ ಯಶವಂತ್ ಸಿನ್ಹಾ
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರಪತಿ ಸ್ಥಾನ ತುಂಬಾ ದೊಡ್ಡ ಸ್ಥಾನ. ದೇಶದ ಸಂವಿಧಾನದ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಯಶವಂತ ಸಿನ್ಹಾ ರಾಷ್ಟ್ರಪತಿ ಆಗುವುದು ತುಂಬಾ ಅಗತ್ಯ ಇದೆ. ಸದ್ಯದ ಪರಿಸ್ಥಿತಿ ನೋಡಿದ್ರೆ ಸಂವಿಧಾನದ ರಕ್ಷಣೆಗೆ ಯಶವಂತ ಸಿನ್ಹಾ ರಾಷ್ಟ್ರಪತಿಯಾಗಿಬೇಕು. ನಾವು ಯಶವಂತ ಸಿನ್ಹಾ ಅವರಿಗೆ ವೋಟ್ ಹಾಕುತ್ತೇವೆ. ಅವರು ಈ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸ ನಮಗೆ ಇದೆ ಎಂದರು.