ಬೆಂಗಳೂರು : ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಕೃಷಿ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ವರ್ಷಕ್ಕಿಂತ ಸುಮಾರು 10 ಲಕ್ಷ ಟನ್ ಆಹಾರ ಧಾನ್ಯ ಕಡಿತವಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ನಿಯಮ 69 ರಡಿ ಚರ್ಚೆಯಲ್ಲಿ ಮಾತನಾಡಿದ ಅವರು, ಇದು ರಾಜ್ಯದ ಆರ್ಥಿಕ ವ್ಯವಸ್ಥೆಗೆ ಹೊಡೆತ ನೀಡಲಿದೆ. ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನೀಡಿ ಖರೀದಿಸುವ ಕೆಲಸ ಸರ್ಕಾರದಿಂದಾಗದೆ ರೈತರು ಆತಂಕ ಎದುರಿಸುತ್ತಿದ್ದಾರೆ ಎಂದರು. ಕೇಂದ್ರ ಸರ್ಕಾರ, ರಾಜ್ಯ ರೈತರಿಂದ 1.10 ಲಕ್ಷ ಟನ್ ಭತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸಿ ಎನ್ನುತ್ತಿದೆ.
ಇಂದು ರೈತರು 29 ಲಕ್ಷ ಟನ್ ಭತ್ತ ಬೆಳೆದಿದ್ದು, ಅಷ್ಟನ್ನು ನೀವು ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಇಲ್ಲದಿದ್ದರೆ ರೈತರ ಕಷ್ಟಕ್ಕೆ ಸ್ಪಂದಿಸಿದಂತಾಗುವುದಿಲ್ಲ ಎಂದರು. ಇದೇ ರೀತಿ ತೊಗರಿ, ಕೊಬ್ಬರಿ ಸೇರಿ ಮತ್ತಿತರ ಬೆಳೆ ಬೆಳೆದವರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಬರಬೇಕು ಎಂದು ಪತ್ರ ಬರೆದ್ರೆ ಅದಕ್ಕೆ ಉತ್ತರ ನೀಡುವ ಸೌಜನ್ಯ ಸರ್ಕಾರಕ್ಕಿಲ್ಲ. ಇದರ ಅರ್ಥ ರಾಜ್ಯ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಎರಡು ವರ್ಷದೊಳಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಸಚಿವ ಮಾಧುಸ್ವಾಮಿ
ಭತ್ತ, ರಾಗಿ, ಶೇಂಗಾ ಕಟಾವು ಶುರುವಾಗಿದೆ. ಮೆಕ್ಕೆಜೋಳ, ಜೋಳ, ಉದ್ದು, ಹೆಸರು, ಹುಚ್ಚೆಳ್ಳು ಕಟಾವಿಗೆ ಬಂದಿವೆ. ರೈತರು ಗೋದಾಮಿನಲ್ಲಿ ಬೆಳೆ ಇಟ್ಟುಕೊಳ್ಳುವುದಿಲ್ಲ, ಕೂಡಲೇ ಮಾರಾಟ ಮಾಡುತ್ತಾರೆ. ಸುಮಾರು 17 ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಘೋಷಿತ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ದರ ಕಡಿಮೆ ಆಗಿದೆ. ಭತ್ತವನ್ನು 1868 ರೂ.ಗೆ ಖರೀದಿಸದೇ ಇದ್ದರೆ ರೈತರಿಗೆ ಸಾಕಷ್ಟು ನಷ್ಟವಾಗುತ್ತದೆ. ನೋಂದಣಿ ಕೇಂದ್ರಗಳನ್ನೇ ರಾಜ್ಯ ಸರ್ಕಾರ ಆರಂಭಿಸಿಲ್ಲ. ನೀವು ರೈತರಿಗೆ ಹೇಗೆ ನ್ಯಾಯ ಕೊಡುತ್ತೀರಿ ಎಂದು ಪ್ರಶ್ನಿಸಿದರು.
ಮೊದಲೇ ಇಳುವರಿ ಕುಂಠಿತವಾಗಿ ಬೆಳೆ ನಷ್ಟವಾಗಿದೆ. ಹಾಗಾಗಿ ರೈತರು ಬಿಡಿಗಾಸಿಗೆ ತಮ್ಮ ಉತ್ಪನ್ನ ಮಾರಾಟ ಮಾಡಬೇಕಿದೆ. ಈ ವರ್ಷ 29 ಲಕ್ಷ ಟನ್ ಭತ್ತ ಬೆಳೆ ನಿರೀಕ್ಷಿಸಲಾಗಿದೆ. ಅದರಲ್ಲಿ ಕನಿಷ್ಟ ಶೇ.80 ಬೆಳೆ ಖರೀದಿ ಮಾಡದಿದ್ದರೆ ಹೇಗೆ?. ಬರೀ 2.50 ಲಕ್ಷ ಟನ್ ಖರೀದಿಸಿದರೆ ಹೇಗೆ?. ಕೇಂದ್ರ ಕೂಡ ಬೆಂಬಲ ಬೆಲೆಯನ್ನು ತಪ್ಪಾಗಿ ನಿಗದಿ ಮಾಡುತ್ತಿದೆ. ನಾನು ಪ್ರಧಾನಿ ಅವರಿಗೆ ಜೂನ್ನಲ್ಲಿ ಪತ್ರ ಬರೆದಿದ್ದೆ. ರೈತರಿಗೆ ಅನ್ಯಾಯ ಆಗುತ್ತಿದ್ದು, ಬೆಂಬಲ ಬೆಲೆ ನಿಗದಿ ಪುನರ್ ಪರಿಶೀಲನೆ ಮಾಡಿ ಎಂದು ಕೇಳಿದ್ದೆ. ಆದರೆ, ಅವರು ಉತ್ತರ ಕೊಟ್ಟಿಲ್ಲ ಎಂದರು.