ಬೆಂಗಳೂರು : ಹಿಜಾಬ್ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ. ವೋಟ್ಗಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಿಜಾಬ್, ಕೇಸರಿ ಸಂಘರ್ಷ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸದ್ಯ ಈ ವಿಷಯ ಕೋರ್ಟ್ನಲ್ಲಿದೆ. ನಾಳೆ ಏನು ಇತ್ಯರ್ಥ ಆಗುತ್ತೋ ನೋಡೋಣ. ಇವರು ಕೇಸರಿ ಶಾಲು ಹಾಕಿ ಕಳುಹಿಸೋದು ರಾಜಕೀಯ ಎಂದು ವಾಗ್ದಾಳಿ ನಡೆಸಿದರು.
ಹಿಜಾಬ್ ಬಹಳ ವರ್ಷಗಳಿಂದ ಧರಿಸುತ್ತಿದ್ದಾರೆ. ಹಿಜಾಬ್ ಮುಸ್ಲಿಂ ಸಮುದಾಯದ ಒಂದು ಭಾಗ. ಹಿಜಾಬ್ ಹಾಕಿದರೆ ಏನು ತೊಂದರೆ. ಏನು ತೊಂದರೆ ಆಗುತ್ತೆ ಅಂತ ಹೇಳಬೇಕು ಅಲ್ವಾ?. ಮಕ್ಕಳ ಮೇಲೆ ಏನಾದ್ರೂ ದುಷ್ಪರಿಣಾಮ ಬೀಳುತ್ತಾ ಎಂದು ಪ್ರಶ್ನಿಸಿದರು.
ಇದನ್ನು ಓದಿ: ಕಾಲೇಜು ಆವರಣದಲ್ಲಿ ಹಿಜಾಬ್, ಕೇಸರಿ ಶಾಲು ನಡೆಯಲ್ಲ: ಆರಗ ಜ್ಞಾನೇಂದ್ರ
ಪಂಜಾಬ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಜನರ ಅಭಿಪ್ರಾಯ ಪಡೆದು ಘೋಷಣೆ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಪಂಜಾಬ್ ಮಾದರಿ ಕರ್ನಾಟಕದಲ್ಲೂ ಅನುಸರಿಸುತ್ತಾರಾ ಎಂಬ ಪ್ರಶ್ನೆಗೆ, ಗೊತ್ತಿಲ್ಲ, ಹೈಕಮಾಂಡ್ ನಿರ್ಧಾರ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಒಪ್ಪುತ್ತೇವೆ ಎಂದರು.