ಬೆಂಗಳೂರು: 15 ಕ್ಷೇತ್ರಗಳ ಉಪ ಚುನಾವಣೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಆದೇಶವಾಗಿದ್ದು ಇದನ್ನು ಸ್ವಾಗತಿಸುತ್ತೇನೆ. ಆದರೆ ಪ್ರತಿಪಕ್ಷಗಳು ಈ ವಿಚಾರದಲ್ಲಿ ಟೀಕೆ ಮಾಡುತ್ತಿರುವುದು ಮಾತ್ರ ಸರಿಯಲ್ಲವೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸುಪ್ರೀಂಕೋರ್ಟ್ ಆದೇಶದ ಬಗ್ಗೆ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದರು. ದೇವೇಗೌಡರು ಪ್ರಧಾನಿ ಆಗಿದ್ದವರು. ಅವರೇ ಇಷ್ಟೊಂದು ಹಗುರವಾಗಿ ಮಾತನಾಡ್ತಾರೆ ಅಂದರೆ ಏನು ಹೇಳಬೇಕು, ಇದು ಸುಪ್ರೀಂಕೋರ್ಟ್ ಆದೇಶವಲ್ಲವೇ? ದೇವೇಗೌಡರಿಂದ ಈ ರೀತಿಯ ಹೇಳಿಕೆ ನಾನು ನಿರೀಕ್ಷೆ ಮಾಡಿರಲಿಲ್ಲ. ಇವರ ಹೇಳಿಕೆಯಿಂದ ನನಗೆ ನೋವಾಗಿದೆಯೆಂದು ಅಸಮಧಾನ ವ್ಯಕ್ತಪಡಿಸಿದರು.
ಟ್ರಾಫಿಕ್ ಕ್ಲಿಯರ್ ಮಾಡಿಸಿದ ಸಿಎಂ: ಡಾಲರ್ಸ್ ಕಾಲೋನಿಯ ನಿವಾಸದಿಂದ ಹೊರಡುವಾಗ ಸಿಎಂ ಬಿಎಸ್ವೈ ಟ್ರಾಫಿಕ್ ಕ್ಲಿಯರ್ ಮಾಡಿಸಿ ಎಲ್ಲರ ಗಮನ ಸೆಳೆದರು. ಮಾಧ್ಯಮಗಳಿಗೆ ಸಿಎಂ ಹೇಳಿಕೆ ಕೊಡುತ್ತಿದ್ದರಿಂದ ಸ್ವಲ್ಪ ತಡವಾದ ಹಿನ್ನೆಲೆಯಲ್ಲಿ ಝೀರೋ ಟ್ರಾಫಿಕ್ ಕಾರಣಕ್ಕೆ ಅಲ್ಲಿನ ರಸ್ತೆ ಜಾಮ್ ಆಗಿತ್ತು. ಇದನ್ನು ನೋಡಿದ ಸಿಎಂ ರಸ್ತೆಯಲ್ಲಿ ಆಗಿದ್ದ ಟ್ರಾಫಿಕ್ ಜಾಮ್ಅನ್ನು ಸಂಚಾರಿ ಪೊಲೀಸರ ಮೂಲಕ ಟ್ರಾಫಿಕ್ ಕ್ಲಿಯರ್ ಮಾಡಿಸಿದರು. ಜಾಮ್ನಲ್ಲಿ ಸಿಲುಕಿದ್ದ ವಾಹನಗಳನ್ನು ಬಿಟ್ಟ ನಂತರ ಪೇಜಾವರ ಶ್ರೀಗಳನ್ನು ಭೇಟಿ ಮಾಡಲು ಬನಶಂಕರಿಗೆ ಹೊರಟರು.