ಬೆಂಗಳೂರು: ಬೆಂಗಳೂರಿನ ಯಾವುದೇ ಮಸೀದಿಗೆ ಯಾರು ಬೇಕಾದರೂ ಹೋಗಿ ಮುಸ್ಲಿಂ ಧರ್ಮದ ಆಚಾರ, ವಿಚಾರಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ ಎಂದು 'ಮೊಹಮ್ಮದ್ ಫಾರ್ ಮ್ಯಾನ್ ಕೈಂಡ್' ತಂಡದ ಸಂಯೋಜಕರಾದ ಮಹಮ್ಮದ್ ನವಾಜ್ ತಿಳಿಸಿದರು.
ಪ್ರವಾದಿ ಮೊಹಮ್ಮದರ ಜನ್ಮ ದಿನಾಚರಣೆ ಪ್ರಯುಕ್ತ ಪ್ರವಾದಿ ಮೊಹಮ್ಮದ್ ಸರ್ವ ಮಾನವರಿಗಾಗಿ ಎಂಬ ಹೆಸರಿನಲ್ಲಿ ಈ ಮಸೀದಿ ದರ್ಶನ ಅಭಿಯಾನ ನಡೆಸಲಾಗುತ್ತಿದೆ. ಈ ಬಗ್ಗೆ ಮಹಮ್ಮದ್ ನವಾಜ್ ಮಾತನಾಡಿ, ನವೆಂಬರ್ 5 ರಂದು ಸಂಜೆ 4 ರಿಂದ 8 ಗಂಟೆಯವರೆಗೆ ಬೆಂಗಳೂರಿನ ನಾಗರಿಕರು, ಧರ್ಮ ಭೇದವಿಲ್ಲದೇ, ಲಿಂಗ ಭೇದವಿಲ್ಲದೇ ಮಸೀದಿಯನ್ನು ನೋಡಬಹುದು ಎಂದರು.
ಮಸೀದಿಯಲ್ಲಿ ಏನು ನಡೆಯುತ್ತಿದೆ, ಮುಸ್ಲಿಮರ ಆರಾಧನೆ ಯಾವ ರೀತಿ ಇರುತ್ತದೆ ಎಂದು ನೋಡಬಹುದು. ಇದರ ಮುಖ್ಯ ಉದ್ದೇಶ ಪರಸ್ಪರ ಅಪನಂಬಿಕೆ ದೂರ ಮಾಡಿ, ಎಲ್ಲರ ಮನಸ್ಸು ಒಂದು ಮಾಡುವುದೇ ಆಗಿದೆ. ಸಾಮರಸ್ಯ, ಸಹಬಾಳ್ವೆಯ ವಾತಾವರಣವನ್ನು ಗಟ್ಟಿಮಾಡುವ ಉದ್ದೇಶದಿಂದ ಮಸೀದಿ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಎಲ್ಲರೂ ಈ ಕಾರ್ಯಕ್ರಮಕ್ಕೆ ಬರಬೇಕು. ಯಾರಿಗೆ ಏನು ಪ್ರಶ್ನೆ ಇದೆ, ಸಂದೇಹ ಇದೆ ಕೇಳಿ ಚರ್ಚೆ ಮಾಡಬಹುದು. ಮಸೀದಿಯ ಅಪನಂಬಿಕೆ ದೂರ ಆಗಬೇಕು. ಮಸೀದಿ ಎಂಬುದು ಮುಸ್ಲಿಮರ ಅಸ್ಮಿತೆಯಾಗಿದೆ. ಮಸೀದಿಯಲ್ಲಿ ಏನೆಲ್ಲ ನಡೆಯುತ್ತೆ ಅನ್ನುವುದು ಹೊರಗೂ ಗೊತ್ತಾಗಬೇಕು. ಮಸೀದಿ ಮುಕ್ತವಾಗಬೇಕು. ಇಸ್ಲಾಮಿನ ಸಹೋದರತ್ವ ಸಂದೇಶ ಪಾಲನೆಯಾಗಬೇಕು ಎಂಬುದೇ ಉದ್ದೇಶ ಆಗಿದೆ ಎಂದರು.
ಪರಸ್ಪರ ಅರಿವೇ ನಮ್ಮ ನಡುವಿನ ಗೋಡೆ, ಅಪನಂಬಿಕೆಗಳನ್ನು ತೊಡೆದು ಹಾಕಲಿದೆ. ದೇವಸ್ಥಾನ ದರ್ಶನ, ಚರ್ಚ್ ದರ್ಶನಗಳಿದ್ದರೂ ಮುಸ್ಲಿಂ ಸಮುದಾಯದ ಜನರು ಭೇಟಿ ಕೊಡಲಿದ್ದಾರೆ ಎಂದು ಹೇಳಿದರು.