ಬೆಂಗಳೂರು: ಆನ್ಲೈನ್ ಮಾರುಕಟ್ಟೆ ದಿಗ್ಗಜ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮಾರಾಟವನ್ನು ಮರು ಆರಂಭಿಸಿದ್ದಾರೆ. ಒಂದೆರಡು ಸಂಸ್ಥೆಯನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಹಿಂದಿನ ಸ್ಥಿತಿಗೆ ತಲುಪಿವೆ. ಆದರೆ, ವ್ಯಾಪಾರ ಮಾತ್ರ ಸಾಧ್ಯವಾಗುತ್ತಿಲ್ಲ. ಕಾರಣ ಜನರ ಕೈಲಿ ಹಿಂದಿನಷ್ಟು ಹಣವಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಉತ್ಪನ್ನವನ್ನು ತಮಗೆ ತಲುಪಿಸುವ ಡಿಲೆವರಿ ಹುಡುಗರ ಮೇಲೆ ಪೂರ್ಣ ನಂಬಿಕೆ ಬರುತ್ತಿಲ್ಲ.
ಒಂದೊಮ್ಮೆ ತಾವು ಕೊಂಡುಕೊಂಡ ವಸ್ತು ಹೊರಟಲ್ಲಿಂದ, ತಲುಪುವ ಮಧ್ಯೆ ಎಲ್ಲಾದರೂ ಕೊರೊನಾ ಸೋಂಕು ಅಂಟಿಸಿಕೊಂಡು ಬಂದು ಬಿಡುವುದೋ, ವಸ್ತುವನ್ನು ತಂದುಕೊಡುವ ಹುಡುಗರೇ ಏನಾದರೂ ರೋಗ ಹಚ್ಚಿ ಬಿಟ್ಟರೆ ಎನ್ನುವ ಆತಂಕ ಕಾಡುತ್ತಿದೆ. ಇದಕ್ಕೆ ಕಾರಣ ದೆಹಲಿಯಲ್ಲಿ ಆನ್ಲೈನ್ ಉತ್ಪನ್ನವನ್ನು ತಂದುಕೊಡುತ್ತಿರುವ ಕೆಲವರು ಬಾಕ್ಸ್ ಮೇಲೆ ಉಗುಳು ಹಚ್ಚುತ್ತಾರೆ ಎಂದು ಕೆಲವರು ಸಾಂದರ್ಭಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ದೇಶಾದ್ಯಂತ ಜನರಲ್ಲಿ ಆನ್ಲೈನ್ ಉತ್ಪನ್ನ ಕೊಳ್ಳಲು ಹಿಂಜರಿಯುವಂತೆ ಮಾಡಿದೆ.

ಇಷ್ಟು ದಿನ ಕ್ಯಾಶ್ ಆನ್ ಡಿಲೇವರಿ ನೀಡುತ್ತಿದ್ದ ಸಂಸ್ಥೆಗಳು ಏಕಾಏಕಿ ಈ ಸೇವೆ ನಿಲ್ಲಿಸಿವೆ. ಬ್ಯಾಂಕ್ ಖಾತೆಯ ವಿವರ ನೀಡಿ ಕೊಂಡುಕೊಳ್ಳುವ, ಹಣ ಪಾವತಿಸಿ ವಸ್ತುವಿಗಾಗಿ ಕಾಯುವ ದಿನ ಎದುರಾಗಿದೆ. ಹಿಂದೆಲ್ಲಾ ಬುಕ್ ಮಾಡಿದ 3 - 4 ದಿನಕ್ಕೆ ವಸ್ತು ಕೈ ಸೇರುತ್ತಿತ್ತು. ಆದರೆ, ಈಗ 15-20 ದಿನ ಕಾಯಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಥವಾ ಆಯಾ ರಾಜ್ಯದ ಮುಖ್ಯಮಂತ್ರಿಗಳು ಲಾಕ್ಡೌನ್ ವಿಚಾರದಲ್ಲಿ ಕೈಗೊಳ್ಳುವ ತೀರ್ಮಾನ ಆಧರಿಸಿ ಆನ್ಲೈನ್ ಉತ್ಪನ್ನಗಳ ಹಿಂದಿನ ಸ್ಥಿತಿ ನಿರ್ಧಾರವಾಗಲಿದೆ.
ಆನ್ಲೈನ್ ದಿಗ್ಗಜ ಸಂಸ್ಥೆಯೊಂದರ ಉತ್ಪನ್ನವನ್ನು ಬುಕ್ ಮಾಡಿದ ಗ್ರಾಹಕರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಹಾವೇರಿ ಮೂಲದ ವ್ಯಕ್ತಿ ಕಿಶೋರ್, ನಾವು ಸಮರ್ಪಕವಾಗಿಯೇ ಉತ್ಪನ್ನವನ್ನು ಜನರಿಗೆ ತಲುಪಿಸುತ್ತೇವೆ. ಆದರೆ ಜನರೇ ಕೊಂಡುಕೊಳ್ಳುತ್ತಿಲ್ಲ. ವಿಶೇಷ ಅಂದರೆ ಕೊರೊನಾ ಬರುವುದಕ್ಕಿಂತ ಮುನ್ನ ದಿನಕ್ಕೆ ನಮ್ಮ 5 ಕಿ.ಮೀ. ವ್ಯಾಪ್ತಿಯಲ್ಲಿ100ಕ್ಕೂ ಹೆಚ್ಚು ಉತ್ಪನ್ನ ತಲುಪಿಸುತ್ತಿದ್ದೆ. ಆದರೆ, ಈಗ ಕಡಿಮೆ ಆಗಿದೆ. ಕಳೆದ ಒಂದು ವಾರದಿಂದ ನಮ್ಮ ಸಂಸ್ಥೆ ಉತ್ಪನ್ನವನ್ನು ಆನ್ಲೈನ್ ಮೂಲಕ ಮಾರಲು ಆರಂಭಿಸಿದ್ದು, ದಿನಕ್ಕೆ ಒಂದೆರಡು ವಸ್ತು ತಲುಪಿಸುವ ಸ್ಥಿತಿ ಎದುರಾಗಿದೆ. ಹೀಗೆ ಮುಂದುವರಿದರೆ ನಾವೆಲ್ಲಾ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದರು.