ಬೆಂಗಳೂರು: ಕೊರೊನಾ ಮುನ್ನೆಚ್ಚರಿಕೆಯಾಗಿ ಏರ್ ಶೋಗೆ ಮಾರ್ಗಸೂಚಿ ಈಗಾಗಲೇ ಪ್ರಕಟವಾಗಿದ್ದು, ಜನ ಸಂದಣಿಯನ್ನು ತಪ್ಪಿಸಲು ಹಾಗೂ ಆಸಕ್ತಗರಿಗೆ ಆ್ಯಪ್ ಮೂಲಕ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಫೆಬ್ರವರಿ 3ರಿಂದ 7ರವರೆಗೆ ಐದು ದಿನಗಳ ಕಾಲ ಯಲಹಂಕದ ವಾಯುನೆಲೆಯಲ್ಲಿ ನಡೆಯುವ ಏರ್ ಶೋವನ್ನು ಈಗ ಸಾರ್ವಜನಿಕರು ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ವೀಕ್ಷಿಸಬಹುದಾಗಿದೆ. ಏರ್ ಶೋಗೆ ದೇಶದ ವಿವಿಧ ಭಾಗಗಳಿಂದ ಈ ಬಾರಿಯೂ ಜನರು ಆಗಮಿಸಲಿದ್ದಾರೆ. ಕೊರೊನಾ ಸಮಯದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ಪಾಲಿಸಬೇಕಾಗಿದೆ. ಹೀಗಾಗಿ, ಆಯೋಜಕರು ಆ್ಯಪ್ ಮತ್ತು ಜಾಲತಾಣದ ಮೂಲಕ ಉದ್ಯಮಿಗಳಿಗೆ, ವೈಮಾನಿಕ ಆಸಕ್ತರಿಗೆ ಈ ಬಾರಿ ಅನುವು ಮಾಡಿಕೊಡಲಾಗಿದೆ.
ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಪರೀಕ್ಷೆ, ಕ್ವಾರಂಟೈನ್ ನಿಯಮಗಳನ್ನು ಈಗಾಗಲೇ ಘೋಷಿಸಲಾಗಿದೆ. ಎಲ್ಲಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು, ವೀಕ್ಷಕರು ಕಡ್ಡಾಯವಾಗಿ ಜನವರಿ 31ರ ಬೆಳಗ್ಗೆ 9 ಗಂಟೆಯ ನಂತರ, ಅಂದರೆ 96 ಗಂಟೆ ಮೊದಲು ಪರೀಕ್ಷೆ ಮಾಡಿಸಿಕೊಂಡು ಕೋವಿಡ್ ನೆಗೆಟಿವ್ ರಿರ್ಪೋಟ್ನ್ನು ಆ್ಯಪ್ ಮೂಲಕ ಆಯೋಜಕರಿಗೆ ಕಳಿಸಬೇಕು. ಆ ದಿನವೂ ರಿಪೋರ್ಟ್ ತೆಗೆದುಕೊಂಡು ಹೋಗಬೇಕಾಗಿದ್ದು, ಒಟ್ಟು 15 ಮಂದಿಯನ್ನೊಳಗೊಂಡ ವೈದ್ಯರ ತಂಡ ವರದಿಯನ್ನು ಪರಿಶೀಲಿಸಲಿದೆ. ವಾಯುನೆಲೆಗೆ ಬರುವವರು ಮಾಸ್ಕ್ ಇಲ್ಲದಿದ್ದರೆ, ಪ್ರವೇಶ ಸಿಗುವುದಿಲ್ಲ. ಟಾಯ್ಲೆಟ್, ವಾಶ್ ಬೇಸಿನ್‌ಗಳಲ್ಲಿ ಸೆನ್ಸಾರ್ ಅಳವಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಓದಿ: ಕೊರೊನಾ ಕಾಲದಲ್ಲೂ ಭಾರತದಲ್ಲಿ ಆ್ಯಪಲ್ ಮೊಬೈಲ್ ಮಾರಾಟ ದ್ವಿಗುಣ
ಬ್ಯಾಗೇಜ್ ಸ್ಕ್ಯಾನರ್ ಹಾಗೂ ಯುವಿ ಸ್ಯಾನಿಟೈಸೇಷನ್ ಕಡ್ಡಾಯ ಮಾಡಲಾಗಿದೆ. ಕೊರೊನಾ ಲಕ್ಷಣಗಳು ಕಂಡುಬಂದರೆ ಕೂಡಲೇ ಅವರನ್ನು ಐಸೊಲೇಷನ್ಗೆ ಒಳಪಡಿಸಲಾಗುವುದು. ಸ್ಯಾನಿಟೈಸರ್, ಆಕ್ಸಿಮೀಟರ್, ಮಾಸ್ಕ್, ಮೆಡಿಕಲ್ ಅಟೆಂಡೆಂಟ್, ಡಿಜಿಟಲ್ ಥರ್ಮೋಮೀಟರ್, ಪಿಪಿಇ ಸೂಟ್, ಗ್ಲೌಸ್ ವಾಯುನೆಲೆಯಲ್ಲಿಯೂ ಲಭ್ಯವಿರುತ್ತವೆ. ಸಿಸಿಟಿವಿ ಕ್ಯಾಮರಾ ಬಳಸಿ ಸಾಮಾಜಿಕ ಅಂತರದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ತಿಳಿಸಲಾಗಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿಶೇಷವಾಗಿ ವರ್ಚುವಲ್ ಸ್ಟಾಲ್ ವ್ಯವಸ್ಥೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಅತಿ ಕಡಿಮೆ ದರದಲ್ಲಿ ಕಲ್ಪಿಸಿರುವುದು ವಿಶೇಷವಾಗಿದೆ.