ಬೆಂಗಳೂರು : ಕೋವಿಡ್-19ನಿಂದ ಸ್ಥಗಿತಗೊಂಡಿರುವ ಶಾಲೆಗಳ ಪುನಾರಂಭ ಮಾಡುವ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ ಅಧಿಕಾರಿಗಳ ಸಭೆ ನಡೆಯಲಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ಸಚಿವರುಗಳು, ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಶಾಲೆಗಳ ಆರಂಭ ಮಾಡುವ ಕುರಿತು ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆ ಹೊಸ ವರ್ಷದಿಂದ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಕಾರಣ ನಾಳಿನ ಸಭೆ ಮಹತ್ವ ಪಡೆದುಕೊಂಡಿದೆ. ನಾಳಿನ ಸಭೆಯ ಬಳಿಕ ಶಾಲೆ ಆರಂಭದ ಬಗ್ಗೆ ಸರ್ಕಾರದಿಂದ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಜ.1ರಿಂದ ಶಾಲೆಗಳನ್ನ ಆರಂಭಿಸಲು ಸೂಚನೆ : ಕೋವಿಡ್ ಕಾರಣಕ್ಕೆ ರಾಜ್ಯದಲ್ಲಿ ಶಾಲೆಗಳು, ಪಿಯು ಕಾಲೇಜುಗಳು ಆರಂಭವಾಗಿಲ್ಲ. ಇದೀಗ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಶೈಕ್ಷಣಿಕ ಸಾಲಿನ ಕಾರಣಕ್ಕೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ-ಕಾಲೇಜು ಆರಂಭ ಅನಿರ್ವಾಯವಾಗಿದೆ. ಹೀಗಾಗಿ, ಜನವರಿ 1ರಿಂದ ಶಾಲೆಗಳನ್ನು ಆರಂಭ ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಸೂಚನೆ ನೀಡಿದೆ.
ಓದಿ:ಡಿವೈಎಸ್ಪಿ ಲಕ್ಷ್ಮಿ ಸಾವು ಪ್ರಕರಣ.. ಮರಣೋತ್ತರ, ಎಫ್ಎಸ್ಎಲ್ ವರದಿಯಲ್ಲಿ ಅಡಗಿದೆ ಆರೋಪಿಗಳ ಭವಿಷ್ಯ
ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, 9,10,12 ತರಗತಿ ಶಾಲೆಗಳನ್ನು ಓಪನ್ ಮಾಡಲು ಸೂಚಿಸಲಾಗಿದೆ. ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲು ಕೋರಿದ್ದಾರೆ.
ಶಾಲಾ ಪುನರ್ ಆರಂಭದ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಸುಧಾಕರ್, ನಿನ್ನೆ ಶಿಕ್ಷಣ ಇಲಾಖೆ ಟೆಕ್ನಿಕಲ್ ಕಮಿಟಿಯನ್ನು ಕರೆದು ಈ ಸಂಬಂಧ ಮಾತನಾಡಿದ್ದಾರೆ. ಆರೋಗ್ಯ ಇಲಾಖೆಯಿಂದ ಶಾಲೆ ಆರಂಭದ ಬಗ್ಗೆ ವರದಿ ನೀಡಿದ್ದಾರೆ. ಆದರೆ, ಆ ವರದಿ ನನಗೆ ಇನ್ನೂ ಸಿಕ್ಕಿಲ್ಲ. ಅಂತಿಮವಾಗಿ ಸಿಎಂ ಜೊತೆ ಸಭೆ ನಡೆಸಬೇಕಿದೆ. ಸಭೆಯಲ್ಲಿ ಶಾಲೆ ರೀ ಓಪನ್ ಕುರಿತು ಅಂತಿಮ ನಿರ್ಧಾರ ಹೊರ ಬರಲಿದೆ ಎಂದಿದ್ದಾರೆ.