ಬೆಂಗಳೂರು: ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ ಪ್ರಕರಣ ಸಂಬಂಧ ಅಧಿಕಾರಿಗಳು ಮೌಖಿಕ ವಿವರ ನೀಡಿದ್ದು, ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿ, ಕನಕಪುರದ ಕಪಾಲ ಬೆಟ್ಟದಲ್ಲಿ ಏಸುಪ್ರತಿಮೆ ನಿರ್ಮಾಣವನ್ನು ಟ್ರಸ್ಟ್ನವರೇ ಸ್ಥಗಿತಗೊಳಿಸಿರಬಹುದು. ಪ್ರತಿಮೆ ನಿರ್ಮಿಸಲು ಗೋಮಾಳ ಭೂಮಿ ಕೊಡಲಾಗಿದೆ, ಏಸು ಪ್ರತಿಮೆ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ, ಬೋರ್ ವೆಲ್ ತೋಡಿಸಲಾಗಿದೆ. ಎರಡು ಕಿ.ಮೀ ರಸ್ತೆಯನ್ನೂ ಸಹ ನಿರ್ಮಿಸಲಾಗಿದೆ ಇವೆಲ್ಲವೂ ಅನಧಿಕೃತ. ಹಾಗಾಗಿ ಈ ಕುರಿತು ರಾಮನಗರ ಡಿಸಿ, ಕನಕಪುರ ತಹಸೀಲ್ದಾರ್ ಅವರಿಂದ ವರದಿ ಕೇಳಿದ್ದೆವು, ಅದರಂತೆ ನಿನ್ನೆ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿ ಮೌಖಿಕ ವಿವರ ಕೊಟ್ಟಿದ್ದಾರೆ. ವರದಿ ರೂಪದಲ್ಲಿ ವಿವರ ಕೊಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ವರದಿ ಬಂದ ಬಳಿಕ ಯಾವ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ನಿರ್ಧರಿಸಲಿದೆ ಎಂದರು.
ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಕಿಡಿಗೇಡಿಗಳು ಮಹಿಳೆಯರಿಗೆ ದೌರ್ಜನ್ಯ ಕೊಡೋದು ಹೆಚ್ಚಾಗಿದೆ. ನಿನ್ನೆಯೂ ಕೆಲವು ಯುವಕರು ಕಿರುಕುಳ ಕೊಟ್ಟಿದ್ದಾರೆ ಕಿಡಿಗೇಡಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ಬಂಧನ ಕುರಿತು ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚೆ ಮಾಡುತ್ತೇನೆ. ಮೊದಲು ಇಷ್ಟೊಂದು ಸಂಖ್ಯೆಯಲ್ಲಿ ಯುವಕರು ಎಂಜಿ ರಸ್ತೆಯಲ್ಲಿ ಸೇರ್ತಿರಲಿಲ್ಲ ಈಗೀಗ ಸಾವಿರಾರು ಯುವ ಸಮೂಹ ಬರ್ತಿದೆ. ಇದನ್ನು ಮುಂದಕ್ಕೆ ಹೀಗೇ ಬಿಟ್ಟರೆ ಸಮಸ್ಯೆ ಆಗುತ್ತದೆ. ಪೊಲೀಸರು ವಾರಪೂರ್ತಿ ಹಗಲುರಾತ್ರಿ ಭದ್ರತೆ ಕೊಡುತ್ತಿದ್ದಾರೆ, ಇದನ್ನೂ ಮೀರಿ ಕೆಲವರು ದೌರ್ಜನ್ಯ ಮಾಡಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.