ಬೆಂಗಳೂರು: ಕೃಷಿ ವಿಶ್ವವಿದ್ಯಾನಿಲಯ ಸೋಮವಾರ ನಡೆಸಲು ನಿರ್ಧರಿಸಿರುವ ಆನ್ಲೈನ್ ಪರೀಕ್ಷೆಗೆ ಅನೇಕ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರೀಕ್ಷೆ ನಡೆಸುತ್ತಿರುವ ಆನ್ಲೈನ್ ವೇದಿಕೆಯೇ ಸಮರ್ಪಕವಾಗಿ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.
ಆನ್ಲೈನ್ ಪರೀಕ್ಷೆ ನಡೆಸಲು ಕೃಷಿ ವಿವಿ ವಿದ್ಯಾರ್ಥಿಗಳಿಗೆ ಅಳವಡಿಸಿಕೊಳ್ಳಲು ಸೂಚಿಸಿರುವ ಅಪ್ಲಿಕೇಶನ್ ಅಷ್ಟೊಂದು ಗುಣಮಟ್ಟದಿಂದ ಕೂಡಿಲ್ಲ. ಈ ಹಿಂದೆ ಪರೀಕ್ಷೆ ಬರೆದಿರುವ ಅನೇಕ ವಿದ್ಯಾರ್ಥಿಗಳು ಇದಕ್ಕೆ ನೀಡಿದ ಪ್ರತಿಕ್ರಿಯೆಗಳು ಸಾಕಷ್ಟು ವ್ಯತಿರಿಕ್ತವಾಗಿದೆ. ಅಲ್ಲದೆ ಈ ಅಪ್ಲಿಕೇಶನ್ಗೆ ರೇಟಿಂಗ್ ಕೂಡ ತುಂಬಾ ಕಡಿಮೆ ಇದೆ. ಅತ್ಯಂತ ಕಳಪೆ ಹಾಗೂ ಉತ್ತಮ ನಿರ್ವಹಣೆ ಇಲ್ಲದ ಅಪ್ಲಿಕೇಶನ್ ಬಳಕೆಯನ್ನು ಸದ್ಯ ವಿದ್ಯಾರ್ಥಿಗಳು ಮಾಡಿದ್ದಾರೆ.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಗಳು ಎದುರಾಗಿದ್ದು, ಇದಕ್ಕೆ ಪರಿಹಾರವನ್ನು ವಿಶ್ವವಿದ್ಯಾನಿಲಯದ ಮೂಲಗಳ ಆಗಲಿ ಅಥವಾ ಅಪ್ಲಿಕೇಶನ್ ನಿರ್ವಹಣೆ ಮಾಡುತ್ತಿರುವ ಕಂಪನಿಯ ಕಡೆಯವರು ಸೂಕ್ತ ಪರಿಹಾರ ಒದಗಿಸಿಲ್ಲ. ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೀಗ ಸೋಮವಾರದಿಂದ ಪರೀಕ್ಷೆ ಆರಂಭಿಸಲು ನಿರ್ಧರಿಸಿರುವ ವಿವಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ಮಾತ್ರ ಮಾಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಅತಿ ಹೆಚ್ಚು ಸಮಸ್ಯೆ ಹಾಗೂ ಅತ್ಯಂತ ಕಳಪೆಯಾಗಿ ರೂಪುಗೊಂಡಿರುವ ಅಪ್ಲಿಕೇಶನ್ ಬದಲು ಇನ್ನಾವುದೇ ಸರಳ ಅಪ್ಲಿಕೇಶನ್ ಮೂಲಕ ವಿವಿ ಪರೀಕ್ಷೆ ನಡೆಸಿದರೂ ಅಭ್ಯಂತರವಿಲ್ಲ. ದಯವಿಟ್ಟು ಈಗಿರುವ ಅಪ್ಲಿಕೇಶನ್ನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲ ಎಂಬ ವಾತಾವರಣ ಇದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆದಷ್ಟು ಬೇಗ ಪ್ರಾಯೋಗಿಕ ಹಂತದಲ್ಲಿ ಬಲವಾಗಿರುವ ಅಪ್ಲಿಕೇಶನ್ ಬದಲಿಸುವುದು ಉತ್ತಮ ಎಂಬ ಅಭಿಪ್ರಾಯ ವಿದ್ಯಾರ್ಥಿಗಳಿಂದ ವ್ಯಕ್ತವಾಗುತ್ತಿದೆ.
ಸ್ಟೂಡೆಂಟ್ ಫಾರ್ ಎಂ...
ಸದ್ಯ ಕೃಷಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪರೀಕ್ಷೆ ಬರೆಯಲು ಸ್ಟೂಡೆಂಟ್ ಫಾರ್ ಎಂ ಎಂಬ ಅಪ್ಲಿಕೇಶನ್ ನೀಡಲಾಗಿದೆ. ಗೂಗಲ್ ಪ್ಲೇ ಸ್ಟೋರ್ನಿಂದ ಇದನ್ನು ಡೌನ್ಲೋಡ್ ಮಾಡಿ ಅಳವಡಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದೆ. ಅಪ್ಲಿಕೇಶನ್ಗೆ ಉತ್ತಮ ರೇಟಿಂಗ್ ಇಲ್ಲ. ಜೊತೆಗೆ ಸಾಕಷ್ಟು ವ್ಯತಿರಿಕ್ತ ಅಭಿಪ್ರಾಯಗಳು ಈ ಹಿಂದೆ ಬಳಸಿದ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ. ಬೋರ್ಡ್ ಎಕ್ಸಾಮ್ ನಡೆಸಲು ಸೂಕ್ತ ವೇದಿಕೆ ಅಲ್ಲ ಎಂಬ ಅಭಿಪ್ರಾಯ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ.
ಇತರೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆ ತೆಗೆದುಕೊಳ್ಳಲಾಗಿದೆ. ಐಸಿಎಂಆರ್ ಸೂಚನೆ ಮೇರೆಗೆ ರಾಜ್ಯದ 4 ಕೃಷಿ ವಿಶ್ವವಿದ್ಯಾನಿಲಯಗಳಿಗೆ ಆನ್ಲೈನ್ ಮೂಲಕವೇ ಪರೀಕ್ಷೆ ತೆಗೆದುಕೊಳ್ಳಲಾಗುತ್ತಿದೆ. ಯಾವ ಮಾದರಿಯಲ್ಲಿ ಆನ್ಲೈನ್ ಪರೀಕ್ಷೆ ನಡೆಸಬೇಕು ಎಂಬ ನಿರ್ಧಾರವನ್ನು ಆಯಾ ಕಾಲೇಜುಗಳಿಗೆ ಬಿಡಲಾಗಿದೆ. ಧಾರವಾಡ, ಶಿವಮೊಗ್ಗ, ರಾಯಚೂರು ಮತ್ತು ಬೆಂಗಳೂರಿನ ಕೃಷಿ ವಿವಿಗೆ ಪರೀಕ್ಷೆ ನಡೆಯಬೇಕಿದೆ. ಧಾರವಾಡ ಮತ್ತು ಶಿವಮೊಗ್ಗದಲ್ಲಿ ಸರಳವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಸರಳ ಮಾದರಿಯಲ್ಲಿ ವಾಟ್ಸಾಪ್ಗೆ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಬರಲಿದೆ. ಅವರು ಅದಕ್ಕೆ ಉತ್ತರ ಬರೆದು ವಿವಿಗೆ ಮರಳಿ ವಾಟ್ಸಪ್ ಮೂಲಕವೇ ಕಳಿಸಿ ಕೊಡಬೇಕಾಗಿದೆ. ರಾಯಚೂರು ವಿವಿಯಲ್ಲಿ ಝೂಮ್ ಮಾದರಿಯಲ್ಲಿ ಇರುವ ವೆಬ್ ಎಕ್ಸ್ ಅಪ್ಲಿಕೇಶನ್ ಮೂಲಕ ಸರಳವಾಗಿ ಪರೀಕ್ಷೆ ಬರೆಯಲಾಗುತ್ತದೆ.
ಬೆಂಗಳೂರು ವಿವಿಯಲ್ಲಿ ಟೈಪ್ 1 ಟೈಪ್ 2 ಎಂಬ ಎರಡು ವಿಭಾಗ ಮಾಡಿ ಪರೀಕ್ಷೆ ಬರೆಸಲಾಗುತ್ತಿದೆ. ವಿಭಾಗ ಒಂದರಲ್ಲಿ ಪಡೆಯುತ್ತಿರುವ ಪರೀಕ್ಷೆಯಲ್ಲಿ ಸಮಸ್ಯೆ ಎದುರಾಗಿದೆ. ಬೆಂಗಳೂರು ನಗರ ಹಾಗೂ ಅಕ್ಕಪಕ್ಕದ ಜಿಲ್ಲೆಯ ಸುಮಾರು 1600 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ. ಇಂಟರ್ನೆಟ್ ಗುಣಮಟ್ಟವು ಚೆನ್ನಾಗಿರಬೇಕು ಸೇರಿದಂತೆ ಹಲವು ನಿಬಂಧನೆಗಳು ಅಪ್ಲಿಕೇಶನ್ಗೆ ಇದೆ. ಕೋವಿಡ್-19 ಹಿನ್ನೆಲೆ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಹಳ್ಳಿಗಳಿಗೆ ತೆರಳಿದ್ದಾರೆ. ಅಲ್ಲಿ ಗುಣಮಟ್ಟದ ಇಂಟರ್ನೆಟ್ ವ್ಯವಸ್ಥೆ ಸಿಗುತ್ತಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ವಿದ್ಯಾರ್ಥಿಗಳಿಗೆ ಗ್ರೇಡ್ ಕೂಡ ಕಡಿಮೆ ಆಗಲಿದೆ. ಭವಿಷ್ಯಕ್ಕೆ ಇದು ಸಮಸ್ಯೆ ಆಗಲಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯಾವಾಗಿದೆ.
ವಿದ್ಯಾರ್ಥಿಗಳ ಸಮಸ್ಯೆವೇನು..?
ಈ ಬಗ್ಗೆ ಮಾಹಿತಿ ನೀಡಿದ ವಿದ್ಯಾರ್ಥಿಯೊಬ್ಬ, ಗ್ರೇಟ್ ಕಡಿಮೆ ಆದರೆ ನಮಗೆ ಉದ್ಯೋಗವಕಾಶದಲ್ಲಿ ಸಮಸ್ಯೆ ಆಗಲಿದೆ. ಬೆಂಗಳೂರು ನಗರದ ವಿದ್ಯಾರ್ಥಿಗಳಿಗೆ ಯಾವುದೇ ಮೀಸಲಾತಿ ಸೌಲಭ್ಯ ಕೂಡ ಸಿಗುವುದಿಲ್ಲ. ಸಮಸ್ಯೆ ಹೇಳಿಕೊಂಡರೆ ಯಾರೂ ಸ್ಪಂದಿಸುತ್ತಿಲ್ಲ. ನೀವು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದೀರಿ. ಈ ಹಿನ್ನೆಲೆ ಬೇರೆ ಅಪ್ಲಿಕೇಶನ್ಗಳು ಸಹಕಾರ ನೀಡಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ವಿವಿಗಳಲ್ಲಿ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಝೂಮ್ ಮಾದರಿಯ ಬಳಸಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ನಾವು 1,600 ಮಂದಿ ಹೇಗೆ ಹೆಚ್ಚಾದವು ಎಂದು ತಿಳಿಯುತ್ತಿಲ್ಲ. ಸರಳವಾಗಿ ಪರೀಕ್ಷೆ ನಡೆಸುವ ಅವಕಾಶವಿದ್ದರೂ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ವಿದ್ಯಾರ್ಥಿಯ ಅಳಲಾಗಿದೆ.
ಈಗಾಗಲೇ ಎರಡು ಸಾರಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಅದು ವಿಫಲವಾಗಿದೆ. ಸಾಕಷ್ಟು ಮಂದಿ ಅಪ್ಲಿಕೇಶನ್ ಸಮಸ್ಯೆಯಿಂದಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಆನ್ಲೈನ್ ಮೂಲಕ ಪರೀಕ್ಷೆ ಬರೆಯಲು ನಾವು ಸಿದ್ಧವಿದ್ದೇವೆ. ಆದರೆ ಇಂತಹ ಒಂದು ವಿದ್ಯಾರ್ಥಿ ಸ್ನೇಹಿ ಅಲ್ಲದ ಅಪ್ಲಿಕೇಶನ್ ಬಳಕೆಗೆ ನಮಗೆ ಇಷ್ಟವಿಲ್ಲವೆಂದು ವಿದ್ಯಾರ್ಥಿ ಮಾತಾಗಿದೆ.
ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ, ಅಪ್ಲಿಕೇಶನ್ನಿಂದ ಸಾಕಷ್ಟು ಸಮಸ್ಯೆಗಳು ಇವೆ. ಯಾವುದೇ ಭದ್ರತೆ ಇಲ್ಲ. ದಾಖಲೆಗಳು ಏಕಾಏಕಿ ಅಳಿಸಿಹೋಗುತ್ತವೆ. ಅಲ್ಲದೆ ಆಚೀಚೆ ನೋಡುವಂತೆ ಇಲ್ಲ. ಹೆಚ್ಚು ಸಾರಿ ನೋಡಿದರು ಇದು ಪರೀಕ್ಷೆ ನಕಲಿ ಕರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪರೀಕ್ಷೆ ಬರೆಯಲು ತಡೆ ಒಡ್ಡಲಾಗುತ್ತದೆ. ಸಾಕಷ್ಟು ವಿದ್ಯಾರ್ಥಿಗಳ ಮೊಬೈಲ್ ಹ್ಯಾಂಗ್ ಆಗುತ್ತಿದೆ. ಸಮಸ್ಯೆ ಆಗುತ್ತಿದೆ ಎಂದು ಹೆಚ್ಚಿನವರು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿಲ್ಲ ಎಂದಿದ್ದಾರೆ.
ಮತ್ತೋರ್ವ ವಿದ್ಯಾರ್ಥಿ ಮಾತನಾಡಿ, ಆ.22 ಕ್ಕೆ ಆನ್ಲೈನ್ ಮೂಲಕ ಪರೀಕ್ಷೆ ನಡೆಯಬೇಕಿತ್ತು. ಆದರೆ ಈ ನಡುವೆ ಸಮಸ್ಯೆ ಎದುರಾಗಿದ್ದರಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಮುಂದಿನ ಸೋಮವಾರ ಪರೀಕ್ಷೆ ತಿಳಿದುಕೊಳ್ಳಲು ನಿರ್ಧರಿಸಿದ್ದು, ಅದು ಸಹ ನಡೆಯುವುದು ಅನುಮಾನ. ಅಪ್ಲಿಕೇಶನ್ನಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ಮಾಡಲಾಗಿಲ್ಲ. ಸಾಕಷ್ಟು ದೂರು ನೀಡಿದರೂ ಪ್ರತಿಕ್ರಿಯೆ ಸಿಗದಿರುವುದು ನಮಗೆ ನಿರಾಸೆ ಉಂಟಾಗಿದೆ ಎಂದು ಆಕೆಯ ಅಭಿಪ್ರಾಯವಾಗಿದೆ.