ಬೆಂಗಳೂರು : 2021-22ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಜನವರಿ 27ರಿಂದ (ಗುರುವಾರ) 30ರವರೆಗೆ ನಾಲ್ಕು ದಿನಗಳ ಕಾಲ ಆನ್‌ಲೈನ್ ಕೌನ್ಸೆಲಿಂಗ್ ನಡೆಯಲಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಟ್ಟು 10,636 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಅಭ್ಯರ್ಥಿಗಳು ಜೇಷ್ಠತೆ ಆಧಾರದ ಮೇಲೆ ತಮಗೆ ಬೇಕಾದ ಕಾಲೇಜನ್ನು ಕೌನ್ಸೆಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಬಳಿಕ ತಮ್ಮ ಕಚೇರಿಯಿಂದ ನೇಮಕಾತಿ ಆದೇಶ ನೀಡಲಾಗುತ್ತದೆ.
ಅದರ ನಂತರದ ಎರಡು ದಿನಗಳಲ್ಲಿ ಸೂಚಿಸಿದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ವರದಿ ಮಾಡಿಕೊಳ್ಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಮೂಲ ದಾಖಲೆಗಳನ್ನು ಪರಿಶೀಲನೆಗೆ ಒಪ್ಪಿಸಿ, ಕರ್ತವ್ಯಕ್ಕೆ ಹಾಜರಾಗಬೇಕು. ದಾಖಲೆಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಅಂತಹವರನ್ನು ಕೈಬಿಡಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟು 47 ವಿಷಯಗಳಿಗೆ ಉಪನ್ಯಾಸಕರು : ಒಟ್ಟು 47 ವಿಷಯಗಳಲ್ಲಿ ವಾರಕ್ಕೆ 15 ಗಂಟೆಗಳ ಬೋಧನೆಯ ಪೂರ್ಣ ಕಾರ್ಯಭಾರವಿರುವ 7,225 ಮತ್ತು ಭಾಗಶಃ ಕಾರ್ಯಭಾರವಿರುವ 3,411 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಯಾವ ವಿಷಯದಲ್ಲಿ ಎಷ್ಟು ಹುದ್ದೆಗಳು?: ಈ ಹುದ್ದೆಗಳಲ್ಲಿ ವಾಣಿಜ್ಯ 1,830, ಕನ್ನಡ 1,008, ಇತಿಹಾಸ 675, ಇಂಗ್ಲಿಷ್ 736, ಸಮಾಜಶಾಸ್ತ್ರ 526, ಅರ್ಥಶಾಸ್ತ್ರ 620, ಬ್ಯುಜೆನೆಸ್ ಮ್ಯಾನೇಜ್ಮೆಂಟ್ 490, ಕಂಪ್ಯೂಟರ್ ಸೈನ್ಸ್ 910, ಭೌತಶಾಸ್ತ್ರ 562, ರಾಜ್ಯಶಾಸ್ತ್ರ 602, ರಸಾಯನಶಾಸ್ತ್ರ 663, ಗಣಿತ 492, ಪ್ರಾಣಿಶಾಸ್ತ್ರ 198, ಸಸ್ಯಶಾಸ್ತ್ರ 212, ಮನೋವಿಜ್ಞಾನ 54, ಪರಿಸರ ವಿಜ್ಞಾನ 53, ಸಮಾಜಕಾರ್ಯ 80 ಮತ್ತು ಉರ್ದು ವಿಷಯಗಳಲ್ಲಿ 78 ಹುದ್ದೆಗಳನ್ನು ಹೊಂದಿವೆ ಎಂದು ಪ್ರದೀಪ್ ಮಾಹಿತಿ ನೀಡಿದ್ದಾರೆ.
ಆದ್ಯತೆ : ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿರುವವರನ್ನು ಜ್ಯೇಷ್ಠತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೌನ್ಸೆಲಿಂಗ್ ಬಳಿಕ ಎಲ್ಲರೂ ಹಾಜರಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ