ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ತರಗತಿ ಆರಂಭಿಸಲು ಅನುಮತಿ ನೀಡಲಾಗಿದ್ದು, ಕೊರೊನಾ ಕಾರಣಕ್ಕೆ ಭೌತಿಕ ತರಗತಿಗೆ ಬ್ರೇಕ್ ಹಾಕಲಾಗಿದೆ. ಬದಲಿಗೆ, ಆನ್ಲೈನ್ ಮೂಲಕ ಶೈಕ್ಷಣಿಕ ವರ್ಷ ಆರಂಭಿಸಲು ಸೂಚಿಸಲಾಗಿದೆ.
ಈ ಕುರಿತು ಇಂದು ರೂಪ್ಸಾ(ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ)ದ ರಾಜ್ಯಾಧ್ಯಕ್ಷ ಹಾಲನೂರು ಎಸ್. ಲೇಪಾಕ್ಷಿ ಮಾತನಾಡಿ, ನಾಳೆಯಿಂದ ಪಾಠ ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ತರಗತಿ ಆರಂಭವಾದರೆ ಆರ್ಟಿಇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. 1 ರಿಂದ 6ನೇ ತರಗತಿವರೆಗೆ ಉಚಿತ ಶಿಕ್ಷಣಕ್ಕೆ ಅವಕಾಶ ಇದೆ. ಉಚಿತ ಶಿಕ್ಷಣ ಮುಂದುವರೆಸಲು 2 ತಿಂಗಳ ಹಿಂದೆಯೇ ಇಲಾಖೆ ಉನ್ನತೀಕರಣಕ್ಕೆ ಅರ್ಜಿ ಹಾಕಬೇಕು. ಆದರೆ ಇಲ್ಲಿಯವರೆಗೂ ಅರ್ಜಿ ಬಿಟ್ಟಿಲ್ಲ ಎಂದು ತಿಳಿಸಿದ್ದಾರೆ.
ಗುರುವಾರದಿಂದ ತರಗತಿಗಳು ಆರಂಭವಾಗುತ್ತಿವೆ, ಆದರೆ ಮಕ್ಕಳ ದಾಖಲಾತಿಯೇ ಆಗಿಲ್ಲ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಈ ಬಾರಿ ಶೇ.5ರಷ್ಟು ಕೂಡ ದಾಖಲಾತಿ ಆಗಿಲ್ಲ. ಇತ್ತ ಗ್ರಾಮೀಣ ಭಾಗದಲ್ಲಿ ಆನ್ಲೈನ್ ಕ್ಲಾಸ್ಗೆ ಪೋಷಕರಿಂದ ವಿರೋಧವಿದೆ. ಹೀಗಾಗಿ ಪಾಳಿ ಪದ್ಧತಿ ಅಥವಾ ವಿದ್ಯಾಗಮ ಆರಂಭಿಸಿ ಅಂತ ಮನವಿ ಮಾಡಿದರು.
ಬಜೆಟ್ ಶಾಲೆಗಳಲ್ಲಿ ಶುಲ್ಕ ಕಡಿತ ಮಾಡಬಾರದು
ಶುಲ್ಕ ವಿಚಾರವಾಗಿವನ್ನೂ ಪ್ರಸ್ತಾಪಿಸಿದ ಅವರು, ಈ ಬಾರಿ ಕಾರ್ಪೊರೇಟ್ ಶಾಲೆಗಳಲ್ಲಿ ಮಾತ್ರ ಶುಲ್ಕ ಕಡಿತ ಮಾಡಬೇಕು. ಬಜೆಟ್ ಶಾಲೆಗಳಲ್ಲಿ ಶುಲ್ಕ ಕಡಿತ ಮಾಡಬಾರದು. ಬಜೆಟ್ ಶಾಲೆಗಳಲ್ಲಿ ಶುಲ್ಕ ಕೇವಲ 15 ರಿಂದ 20 ಸಾವಿರ ಮಾತ್ರ ಪಡೆಯುತ್ತಾರೆ. ಬಜೆಟ್ ಶಾಲೆಗಳಲ್ಲಿ ಶುಲ್ಕ ಕಡಿತ ಈ ಬಾರಿ ಒಪ್ಪಲ್ಲ. ಶಾಲೆಗಳ ಉನ್ನತೀಕರಣ ಮಾಡದೇ ತರಗತಿ ಆರಂಭಿಸೋದು ಸರಿಯಲ್ಲ. ಆರ್ಟಿಇ ಅಡಿಯಲ್ಲಿ 15 ರಿಂದ 20 ಸಾವಿರ ಮಕ್ಕಳಿದ್ದಾರೆ. ಇದರಲ್ಲಿ 4 ಸಾವಿರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಹುದು. ಹೀಗಾಗಿ ಕೂಡಲೇ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ರೂಪ್ಸಾ ಹೆಸರು ದುರ್ಬಳಕೆ
ರೂಪ್ಸಾ ಹೆಸರನ್ನ ಲೋಕೇಶ್ ತಾಳಿಕಟ್ಟೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಲೇಪಾಕ್ಷಿ ಆರೋಪಿಸಿದ್ದಾರೆ. ಹೈಕೋರ್ಟ್ನಲ್ಲಿ ಕೇಸ್ ಹಾಕಿದರು, ಆದರೆ ಅದು ವಜಾ ಆಯ್ತು. ಬಳಿಕ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ಗೆ ಅಪೀಲು ಹಾಕಿದಾಗ ಸ್ಟೇ ಕೊಟ್ಟಿದ್ದರೂ ಕೂಡ ಹೆಸರು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಿದ್ದೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.