ಬೆಂಗಳೂರು : ಪೀಣ್ಯ ಕೈಗಾರಿಕಾ ಸಂಘದ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಸಭೆ ನಡೆಸಿದರು. ಕೈಗಾರಿಕಾ ಪ್ರದೇಶದ ಸ್ಥಿತಿಗತಿ ಹಾಗೂ ದೂರುಗಳ ಬಗ್ಗೆ ಪರಿಶೀಲನೆ ನಡೆಸಿದರು.
ದಾಸರಹಳ್ಳಿ ಶಾಸಕ ಮಂಜುನಾಥ್, ದಾಸರಹಳ್ಳಿ ವಲಯ ಜಂಟಿ ಆಯುಕ್ತ ನರಸಿಂಹ ಮೂರ್ತಿ, ಮುಖ್ಯ ಇಂಜಿನಿಯರ್(ರಸ್ತೆ ಮೂಲಭೂತ ಸೌಕರ್ಯ) ಪ್ರಹ್ಲಾದ್, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್, ಸಂಘದ ಪದಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಜಾಲಹಳ್ಳಿ ಕ್ರಾಸ್ ಎನ್ಹೆಚ್ 7ಕ್ಕೆ ಭೇಟಿ ನೀಡಿ, ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆಗಳ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ನೆಲಗದನಹಳ್ಳಿ ಮುಖ್ಯ ರಸ್ತೆ, 8ನೇ ಮುಖ್ಯ ರಸ್ತೆ ಎನ್ಹೆಚ್7, ಹೆಸರಘಟ್ಟ ಮುಖ್ಯ ರಸ್ತೆಗೆ ಭೇಟಿ ನೀಡಿದರು. ರಸ್ತೆಗಳು ಚೆನ್ನಾಗಿದ್ದರೂ ಜಲಮಂಡಳಿ ವತಿಯಿಂದ ಕಾಮಗಾರಿಗಳಿಗಾಗಿ ರಸ್ತೆ ಕತ್ತರಿಸಿ ದುರಸ್ತಿಗೊಂಡಿರುವುದು ಗಮನಿಸಿದರು.
ಪೀಣ್ಯ ಕೈಗಾರಿಕಾ ಸಂಘದ ಜೊತೆ ನಡೆದ ಸಭೆಯಲ್ಲಿ ಆ ಪ್ರದೇಶದಲ್ಲಿರುವ ರಸ್ತೆಗಳು, ವಿದ್ಯುತ್, ಕೈಗಾರಿಕಾ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಗಮನಕ್ಕೆ ತಂದರು. ಕಸದ ಸೆಸ್ ಪಾವತಿ ಮಾಡಲಾಗುತ್ತಿದ್ದರೂ, ಕೈಗಾರಿಕಾ ತ್ಯಾಜ್ಯ ತೆರವು ಮಾಡದ ಬಗ್ಗೆ ದೂರು ನೀಡಿದರು.
ನ್ಯೂನತೆ ಪರಿಶೀಲನೆಗೆ ಪ್ರತ್ಯೇಕ ತಂಡ
ಶಾಸಕ ಮಂಜುನಾಥ್ ಮಾತನಾಡಿ, ಮೂಲಸೌಕರ್ಯಗಳನ್ನ ಇನ್ನಷ್ಟೇ ಒದಗಿಸಬೇಕಿದೆ. 100 ಹಳ್ಳಿಗಳು ಸೇರ್ಪಡೆಯಾಗಿವೆ. ಆದರೆ, ಈ ಪ್ರದೇಶ ಅಭಿವೃದ್ಧಿಯಾಗಿಲ್ಲ. ರಸ್ತೆಗಳ ದುರಸ್ತಿ, ಕೆರೆಗಳ ದುರಸ್ತಿ ಆಗಬೇಕಿದೆ ಎಂದರು. ನೆಲಗದನಹಳ್ಳಿ ರಸ್ತೆ ಹಾಗೂ ಹೆಸರಗಟ್ಟ ಮುಖ್ಯ ರಸ್ತೆಗಳಲ್ಲಿ ಕಾವೇರಿ 5ನೇ ಹಂತದ ಪೈಪ್‌ಲೈನ್ ಅಳವಡಿಸುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ ಎಂದರು. ಕೈಗಾರಿಕಾ ಪ್ರದೇಶದಲ್ಲಿ 46 ಕಿ.ಮೀ ಪ್ರಮುಖ ರಸ್ತೆಗಳಿವೆ. 18 ಕಡೆ ಪ್ರವಾಹ ಉಂಟಾಗುವ ಸ್ಥಳಗಳಿವೆ. ಇವುಗಳನ್ನು ಅಭಿವೃದ್ಧಿ ಪಡಿಸುವಂತೆ ತಿಳಿಸಿದರು.
ತಪಾಸಣೆ ಬಳಿಕ ಮಾತನಾಡಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕೈಗಾರಿಕಾ ಪ್ರದೇಶದಲ್ಲಿ ಎಲ್ಲೆಲ್ಲಿ ನ್ಯೂನ್ಯತೆಗಳಿವೆಯೋ ಅದನ್ನು ಸರಿಪಡಿಸಲಾಗುವುದು. ಹೆಚ್ಚುವರಿ ಅನುದಾನ ಕೊಡಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಗುಂಡಿ, ಬೀದಿ ದೀಪಗಳ ರಿಪೇರಿ, ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ.
ಒಂದು ವಾರದೊಳಗೆ ಬೀದಿ ದೀಪಗಳನ್ನು ಸರಿಪಡಿಸಲಾಗುವುದು. ರಸ್ತೆಗುಂಡಿ ಮುಚ್ಚಲು ಒಂದು ವಾರದ ಗಡುವು ನೀಡಲಾಗಿದೆ. ಯಾವುದೇ ದೂರು ಬಾರದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಎಲ್ಲಾ ಇಂಡಸ್ಟ್ರಿಗಳಿಗೂ ಸಂಪರ್ಕ ಕಲ್ಪಿಸುವ 14ನೇ ಮುಖ್ಯ ರಸ್ತೆ ತಕ್ಷಣವೇ ಅಭಿವೃದ್ಧಿ ಆಗಬೇಕಿದೆ ಎಂದರು.
ಇದನ್ನೂ ಓದಿ: ನಕಲಿ ಕೋವಿಡ್ ರಿಪೋರ್ಟ್ ತಂದರೆ ಕೇಸ್ ಹಾಕಿ ಜೈಲಿಗಟ್ಟಿ: ಸಚಿವ ಸೋಮಶೇಖರ್ ಖಡಕ್ ಸೂಚನೆ