ಬೆಂಗಳೂರು: ನಿವೃತ್ತ ಯೋಧರಿಗೆ 2019ರ ಜುಲೈ 1 ರಿಂದ ಪೂರ್ನಾನ್ವಯವಾಗುವಂತೆ ಒನ್ ರ‍್ಯಾಂಕ್ ಒನ್ ಪೆನ್ಷನ್ (ಒಆರ್ ಒಪಿ) ಸ್ಕೀಮ್ ಜಾರಿಗೊಳಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಕ್ಷಣಾ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ನಿವೃತ್ತ ವಿಂಗ್ ಕಮಾಂಡರ್ ಬಿ.ಜಿ. ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯಕ್ಕೆ ನೋಟಿಸ್ ಜಾರಿಗೆ ಆದೇಶಿಸಿದೆ.
ನ್ಯಾಯಾಂಗ ಸಮಿತಿ ಶಿಫಾರಸಿನ ಮೇರೆಗೆ ಸಮಾನ ಶ್ರೇಣಿಗೆ ಸಮಾನ ಪಿಂಚಣಿ ಯೋಜನೆಯನ್ನು 2014ರ ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ 2015ರ ನವೆಂಬರ್ 7ರಂದು ಜಾರಿಗೊಳಿಸಲಾಗಿದ್ದು, ಅದರಂತೆ ಪ್ರತಿ ಐದು ವರ್ಷಕ್ಕೊಮ್ಮೆ ಒಆರ್ಒಪಿ ಪರಿಷ್ಕರಿಸಿ ಪಿಂಚಣಿಯನ್ನು ಮರು ನಿಗದಿ ಮಾಡಬೇಕಿದೆ.
ಆದರೆ, ಅರ್ಜಿದಾರ ಸೈನಿಕರಿಗೆ ಈ ಯೋಜನೆಯಡಿ ಪಿಂಚಣಿ ಪರಿಷ್ಕರಿಸಿಲ್ಲ. ಈ ಸಂಬಂಧ ಕೇಳಿದ ದಾಖಲೆಗಳನ್ನೂ ಒದಗಿಸಿಲ್ಲ. ಪರಿಷ್ಕೃತ ಪಿಂಚಣಿಗಾಗಿ 2014ಕ್ಕೂ ಹಿಂದಿನಿಂದ ಪಿಂಚಣಿ ಪಡೆಯುತ್ತಿರುವ 20 ಲಕ್ಷಕ್ಕೂ ಅಧಿಕ ನಿವೃತ್ತ ಸೈನಿಕರು ಹಾಗೂ 4 ಲಕ್ಷಕ್ಕೂ ಅಧಿಕ ದಿವಂಗತ ಸೈನಿಕರ ಪತ್ನಿಯರು ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದ ಅರ್ಜಿದಾರರೂ ಸೇರಿದಂತೆ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಎಲ್ಲರಿಗೂ ಒಆರ್ಒಪಿ ಯೋಜನೆಯಡಿ ಪರಿಷ್ಕೃತ ಪಿಂಚಣಿ ನೀಡಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ.