ಬೆಂಗಳೂರು: ಡೆಬಿಟ್ ಕಾರ್ಡುಗಳನ್ನು ಬದಲಾಯಿಸಿ ಹಣ ಡ್ರಾ ಮಾಡಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅರುಣ್ ಕುಮಾರ್ ಅಲಿಯಾಸ್ ಎಟಿಎಂ ಅರುಣ್ ಬಂಧಿತ ಆರೋಪಿಯಾಗಿದ್ದಾನೆ.
ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗರಾಜು ಎಂಬುವವರು ಹೆಸರುಘಟ್ಟ ಮುಖ್ಯ ರಸ್ತೆಯ ತ್ರಿವೇಣಿ ಸ್ಕೂಲ್ ಪಕ್ಕದ ಕರ್ನಾಟಕ ಎಟಿಎಂ ಸೆಂಟರ್ಗೆ ಹಣ ತುಂಬಲು ಹೋಗಿದ್ದರು. ಈ ವೇಳೆ ಎಟಿಎಂ ಬಳಕೆ ತಿಳಿಯದೆ ಆರೋಪಿ ಅರುಣ್ ಸಹಾಯ ಕೇಳಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಅರುಣ್, ಅವರ ಡೆಬಿಟ್ ಕಾರ್ಡ್ ಬದಲಾಗಿ ಬೇರೊಂದು ಡೆಬಿಟ್ ಕಾರ್ಡ್ ನೀಡಿದ್ದು, ನಂತರ 3,20,000 ಹಣ ಡ್ರಾ ಮಾಡಿದ್ದಾನೆ.
ಬಳಿಕ ಪ್ರಕರಣದ ತನಿಖೆ ನಡೆಸಿ ಅರುಣ್ ಎಂಬಾತನನ್ನು ಬಂಧಿಸಿದ್ದು, ಆರೋಪಿ ತುಮಕೂರು ಜಿಲ್ಲೆಯವನೆಂದು ತಿಳಿದು ಬಂದಿದೆ. ಆರೋಪಿಯು ಎಟಿಎಂ ಬಳಿ ನಿಂತು ಸಹಾಯ ಮಾಡುವ ನೆಪದಲ್ಲಿ ವಂಚನೆ ಎಸಗಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿ ವಿರುದ್ಧ 2019ರಲ್ಲಿ ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ, ಮಧುಗಿರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಹಾಗೆಯೇ ಸೈಬರ್ ಠಾಣೆಯಲ್ಲಿ ದಾಖಲಾದ ಒಟ್ಟು ನಾಲ್ಕು ಪ್ರಕರಣ ಭೇದಿಸಿ ಬಂಧಿತ ಆರೋಪಿಯಿಂದ 1.6 ಲಕ್ಷ ರೂ. ಮೌಲ್ಯದ ಎರಡು ಮೊಬೈಲ್ ಫೋನ್, 3.7 ಗ್ರಾಂ ಚಿನ್ನದ ಒಡವೆ, 1,13,000 ರೂ. ನಗದು ವಶಪಡಿಸಿಕೊಂಡಿದ್ದಾರೆ.