ಬೆಂಗಳೂರು: ಸಿಸಿಬಿ ಪೊಲೀಸರು ಮತ್ತೊಬ್ಬ ಡ್ರಗ್ ಪೆಡ್ಲರ್ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಟಿಯ ಆಪ್ತ ಕಾರ್ತಿಕ್ ಕೊಟ್ಟ ಮಾಹಿತಿ ಆಧರಿಸಿ ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2018ರಲ್ಲಿ ಕೊಕೈನ್ ಮಾರಾಟ ಕೇಸ್ನಲ್ಲಿ ಪ್ರತೀಕ್ ಶೆಟ್ಟಿ ಜೊತೆ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನವಾಗಿತ್ತು. ಆಗಲೇ ಕಾರ್ತಿಕ್ ರಾಜ್ ಹೆಸರು ಕೇಳಿ ಬಂದಿತ್ತಾದರೂ, ಸಾಕ್ಷ್ಯಾಧಾರ ಸಿಕ್ಕಿರಲಿಲ್ಲ. ಮೊದಲು ರಾಗಿಣಿ ಆಪ್ತ ರವಿಶಂಕರ್ ಕೊಟ್ಟ ಮಾಹಿತಿ ಮೇಲೆ ಕಾರ್ತಿಕ್ ವಶಕ್ಕೆ ಪಡೆದು ತದ ನಂತರ ಕಾರ್ತಿಕ್ ಜೊತೆ ಸಂಪರ್ಕದಲ್ಲಿದ್ದ ಕೆಲವರನ್ನ ಸದ್ಯ ಸಿಸಿಬಿ ಪೊಲೀಸರು ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಸಿಸಿಬಿ ವಶಕ್ಕೆ ಪಡೆದವರ ಮಾಹಿತಿಯನ್ನ ಸಿಸಿಬಿ ಬಿಟ್ಟುಕೊಟ್ಟಿಲ್ಲ. ಸಿಸಿಬಿ ಪೊಲೀಸರು ಚಾಮರಾಜಪೇಟೆಯ ಸಿಸಿಬಿಯ ಕಚೇರಿಯಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಸಿಸಿಬಿ ಮತ್ತೋರ್ವ ಆಫ್ರಿಕನ್ ಪ್ರಜೆಯನ್ನ ಕರೆತಂದಿದ್ದು, ಈತನ ಬಗ್ಗೆ ಕೂಡ ಯಾವುದೇ ಅಧಿಕೃತ ಮಾಹಿತಿ, ಹಾಗೆ ಹೆಸರನ್ನ ಬಹಿರಂಗ ಪಡಿಸಿಲ್ಲ. ಸದ್ಯ ಸಿಸಿಬಿ ಕಚೇರಿಯಲ್ಲಿ ಡ್ರಗ್ ಸಂಬಂಧಪಟ್ಟಂತೆ ಹಲವಾರು ಡ್ರಗ್ ಪೆಡ್ಲರ್ಗಳನ್ನು ಖೆಡ್ಡಾಕ್ಕೆ ಕೆಡವಲು ಸಿಸಿಬಿ ಟೊಂಕ ಕಟ್ಟಿ ನಿಂತಿದ್ದಾರೆ.