ಬೆಂಗಳೂರು: ಕೋವಿಡ್ ರೋಗಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸದ ಬಿಬಿಎಂಪಿ ಬೇಜವಾಬ್ದಾರಿ ಬಯಲಾಗಿದೆ.
ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿಯ 52 ವರ್ಷದ ವ್ಯಕ್ತಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ನಿನ್ನೆ ರಾತ್ರಿ 11-30 ಕ್ಕೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಳೆದ ಐದು ದಿನದಿಂದ ಜ್ವರ, ಕೆಮ್ಮು ಹಾಗು ಶೀತದಿಂದ ಬಳಲುತ್ತಿದ್ದ ವ್ಯಕ್ತಿ ವಿಜಯನಗರದ ಮಾರುತಿ ಕ್ಲಿನಿಕ್ಗೆ ಹೋಗಿದ್ದರು. ವೈದ್ಯರು ಗುರುವಾರ ರಾತ್ರಿ ಕೋವಿಡ್ ಪರೀಕ್ಷೆ ಮಾಡಿದ್ದರು. ಭಾನುವಾರ ಕೋವಿಡ್ ಪಾಸಿಟಿವ್ ರಿಸಲ್ಟ್ ಬಂದಿದೆ. ನಂತರ ಬಿಬಿಎಂಪಿ ವೈದ್ಯರು ನಿಮ್ಮ ಮನೆಗೆ ಬರ್ತಾರೆ, ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ ಎಂಬ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ರೋಗಿಗೆ ಸೋಮವಾರದ ವೇಳೆಗೆ ಉಸಿರಾಟದ ಸಮಸ್ಯೆ ತೀವ್ರಗೊಂಡಿದೆ. ಈ ಬಗ್ಗೆ ಬಿಬಿಎಂಪಿಯವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಆ ವೇಳೆ ಬೇಜವಾಬ್ದಾರಿ ತೋರಿದ ಬಿಬಿಎಂಪಿ ಸಿಬ್ಬಂದಿ, ಆ ವಾರ್ಡ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ.
ಆಶಾ ಕಾರ್ಯಕರ್ತೆಯರು ಮನೆ ಬಳಿ ಬಂದು ಮಾಹಿತಿ ತಗೊಂಡು ಹೋಗಿದ್ದರೂ ಸಹ ನಂತರ ಯಾರೂ ಮನೆಗೆ ಕಡೆಗೆ ಬಂದಿಲ್ಲ. ಆಪ್ತಮಿತ್ರ ಸಹಾಯವಾಣಿ, ಬಿಬಿಎಂಪಿ ಅಧಿಕಾರಿಗಳೂ ಕೂಡಾ ನೆರವಿಗೆ ಬಂದಿಲ್ಲ. 108 ಕ್ಕೆ ಕಾಲ್ ಮಾಡಿದ್ರೂ ಅರ್ಧಗಂಟೆಯಲ್ಲಿ ಬರುತ್ತೇವೆ ಎಂದವರು ಎರಡು ಗಂಟೆಯಾದ್ರೂ ಬಂದಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನಮ್ಮ ತಂದೆಗೆ ಉಸಿರಾಟದ ಸಮಸ್ಯೆ ತೀವ್ರಗೊಂಡಾಗ ಖಾಸಗಿ ಆಂಬುಲೆನ್ಸ್ ಮೂಲಕ ಹೋಗಲು ಮುಂದಾಗಿದ್ದಾರೆ. ಆದರೆ ದಾರಿ ಮಧ್ಯದಲ್ಲೇ ನಿನ್ನೆ ರಾತ್ರಿ 11.30ರ ವೇಳೆಗೆ ಮೃತಪಟ್ಟಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ತೆಗೆದುಕೊಂಡು ಹೋದರೂ ಇಲ್ಲಿಯವರೆಗೆ ಯಾರೂ ಕನಿಷ್ಠ ಮಾಹಿತಿಯನ್ನೂ ನೀಡುತ್ತಿಲ್ಲ ಎಂದು ಮೃತರ ಮಗ ತಿಳಿಸಿದ್ದಾರೆ.