ಬೆಂಗಳೂರು : ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಲಕ್ಕಯ್ಯ ಬಡಾವಣೆಯ ಪೊಲಮ್ಮಾಸ್ ಹೋಟೆಲ್ ಬಳಿ ನಡೆದಿದೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲಮ್ಮಾಸ್ ಮೆಸ್ ಪಕ್ಕದ ಬಿಲ್ಡಿಂಗ್ನ ಕೆಳಮಹಡಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ. ಪರಿಣಾಮ, ಕಟ್ಟಡದ ಹೊರಭಾಗದಲ್ಲಿ ಮಲಗಿದ್ದ ರವಿ (40) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಳೆದ ಕೆಲ ವರ್ಷಗಳಿಂದ ಪೊಲಮ್ಮಾಸ್ ಎಂಬ ಆಂಧ್ರ ಮೆಸ್ ನಡೆಸಲಾಗುತ್ತಿದ್ದು, ಎರಡನೇ ಮಹಡಿಯಲ್ಲಿ ಅಡುಗೆ ಮಾಡಲಾಗುತ್ತದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪಕ್ಕದ ಬಿಲ್ಡಿಂಗ್ನ ಕೆಳ ಮಹಡಿಯಲ್ಲಿ ಉಳಿದುಕೊಳ್ಳಲು ಮನೆ ಮಾಡಿ ಕೊಟ್ಟಿದ್ದು, ಅಲ್ಲಿಯೇ ಸಿಲಿಂಡರ್ಗಳನ್ನು ಸ್ಟೋರ್ ಮಾಡಿ ಇಡಲಾಗಿದೆ. ಮೇಲಿರುವ ಮೆಸ್ ಕಿಚನ್ಗೆ ಈ ಕೆಳಮಹಡಿಯಲ್ಲಿ ಇಟ್ಟಿರುವ ಸಿಲಿಂಡರ್ಗಳ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ರೆಡ್ ಪೈಪ್ ಮೂಲಕ ಈ ಬಿಲ್ಡಿಂಗ್ನಿಂದ ಮೆಸ್ ಬಿಲ್ಡಿಂಗ್ಗೆ ಗ್ಯಾಸ್ ಕನೆಕ್ಷನ್ ಕೊಡಲಾಗಿದ್ದು, ಎಂದಿನಂತೆ ಇಂದು ಸಹ ಮೆಸ್ನ ಕಿಚನ್ನಲ್ಲಿ ಅಡುಗೆ ಮಾಡಲು ಶುರು ಮಾಡಲಾಗಿತ್ತು. ಈ ವೇಳೆ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದು, ಅದನ್ನ ಬದಲಾಯಿಸುವಾಗ ಪೈಪ್ನ ಮೂಲಕ ಗ್ಯಾಸ್ ರಿಫ್ಲೆಕ್ಟ್ ಒಡೆದು ಸಿಲಿಂಡರ್ ಸ್ಫೋಟವಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ : ಗ್ಯಾಸ್ ಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟ.. ಎರಡು ಅಂಗಡಿ ನಾಶ, ಓರ್ವನ ಸ್ಥಿತಿ ಗಂಭೀರ
ಈ ವೇಳೆ ಸಿಲಿಂಡರ್ ಚೇಂಜ್ ಮಾಡುತ್ತಿದ್ದ ಚೋರ್ಲಾ ಹಾಗೂ ನಾಗರಾಜ್ ಎಂಬುವರಿಗೆ ಗಾಯಗಳಾಗಿದೆ. ಸ್ಫೋಟದ ತೀವ್ರತೆಗೆ ಶೆಟರ್ ವರೆಗೂ ಸಿಲಿಂಡರ್ ಸಿಡಿದಿದ್ದು, ಶೆಟರ್ ಬಳಿ ಮಲಗಿದ್ದ ರವಿ ಎಂಬಾತನಿಗೆ ಬಂದು ಬಡೆದಿದೆ. ಪರಿಣಾಮ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ : Cylinder Blast : ಬೆಳಗಾವಿಯಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟ : ನಾಲ್ವರಿಗೆ ಗಂಭೀರ ಗಾಯ
ವಿಚಾರ ಗೊತ್ತಾಗ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದುರಂತ ಸಂಭವಿಸಿದ ಸ್ಥಳದಲ್ಲಿ ಒಟ್ಟು ಹತ್ತು ಸಿಲಿಂಡರ್ಗಳನ್ನ ಸ್ಟೋರ್ ಮಾಡಿ ಇಡಲಾಗಿತ್ತು. ಅದೃಷ್ಟವಶಾತ್ ಬೇರೆ ಸಿಲಿಂಡರ್ಗಳು ಸ್ಫೋಟಗೊಂಡಿಲ್ಲ. ಹಾಗೇನಾದರೂ ಆಗಿದ್ರೆ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು. ಸದ್ಯಕ್ಕೆ ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದು ಸ್ಫೋಟ ಆಗಿದ್ದು ಹೇಗೆ? ಎಂದು ಮಾಹಿತಿ ಕಲೆ ಹಾಕ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್ : ಪತಿ ಸಾವು, ಪತ್ನಿಗೆ ಗಾಯ
ಕಳೆದ ಜೂನ್ 30 ರಂದು ಸಹ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಜ್ಯುವೆಲ್ಲರಿ ಶಾಪ್ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದರು. ಮಹಾರಾಷ್ಟ್ರ ಮೂಲದ ವಿಷ್ಣು ಸಾವಂತ್ ಮೃತ ವ್ಯಕ್ತಿ. ಇವರ ಪತ್ನಿ ವೈಜಯಂತಿ ಎಂಬವರಿಗೆ ಸುಟ್ಟ ಗಾಯಗಳಾಗಿದ್ದವು.