ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿವೋರ್ವ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ಮನೆ, ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ, ಮನೆಯ ಹೊರ ಭಾಗದಲ್ಲಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಮೂವರು ಸಾವು, ಹಲವರಿಗೆ ಗುಂಡೇಟು
ಪೊಲೀಸರ ಫೈರಿಂಗ್ ವೇಳೆ ಮೂವರಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಕಾಡುಗೊಂಡನಹಳ್ಳಿಯಲ್ಲಿ ಮೂವರು ಬಲಿಯಾಗಿದ್ದು, 10ಕ್ಕೂ ಹೆಚ್ಚು ಮಂದಿಗೆ ಗುಂಡೇಟು ಬಿದ್ದಿದೆ ಎಂದು ತಿಳಿದು ಬಂದಿದೆ. ಕಳೆದ ಮೂರು-ನಾಲ್ಕು ಗಂಟೆಗಳಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದರು.
ಮೃತ ವ್ಯಕ್ತಿಗಳ ಹೆಸರು,ವಿಳಾಸ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. 10ಕ್ಕೂ ಅಧಿಕ ಉದ್ರಿಕ್ತರ ಕಾಲಿಗೆ ಗುಂಡು ತಗುಲಿದೆ. ಸ್ಥಳದಲ್ಲಿ ಪವರ್ ಕಟ್ ಆದ ಹಿನ್ನೆಲೆಯಲ್ಲಿ ಅದನ್ನ ದುರ್ಬಳಕೆ ಮಾಡಿಕೊಂಡ ಆರೋಪಿಗಳು ಕಂಡ ಕಂಡಲ್ಲಿ ಕಲ್ಲು ತೂರಾಟ ನಡೆಸಿದರು. ಸಂಬಂಧಪಟ್ಟ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರಿಗೂ ಗಾಯ
ಪ್ರತಿಭಟನೆ ನಿಯಂತ್ರಣ ತೆಗೆದುಕೊಂಡು ಬರುವ ವೇಳೆ ಪೊಲೀಸರ ಮೇಲೂ ಹಲ್ಲೆ ನಡೆಸಲಾಗಿದ್ದು, ಈ ವೇಳೆ ಓರ್ವ ಡಿಸಿಪಿ ಸೇರಿದಂತೆ ಅನೇಕ ಪೊಲೀಸರಿಗೂ ಗಾಯಗಳಾಗಿವೆ ಎಂದು ಡಿಸಿಪಿ ಕಮಲ್ ಪಂತ್ ತಿಳಿಸಿದ್ದಾರೆ.
ಎರಡು ಏರಿಯಾದಲ್ಲಿ ಸೆಕ್ಷನ್ 144 ಜಾರಿ
ಪ್ರತಿಭಟನಾ ಎರಡು ಸ್ಥಳಗಳಾದ ಕೆ.ಜಿ ಹಳ್ಳಿ,ದೇವರ ಜೀವನಹಳ್ಳಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಬೆಂಗಳೂರು ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದು, ಸಂಪೂರ್ಣವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದಿದ್ದಾರೆ.