ಬೆಂಗಳೂರು: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಮಂಜುಳಾ ಎಂಬಾಕೆಯನ್ನು ಬಂಧಿಸಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ಆಗಿರುವ ಡಾ.ಚಂದನ್ ಬಲ್ಲಾಳ್ ಒಡೆತನದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ, ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲಸ ತೊರೆದು ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. ತಲೆಮರೆಸಿಕೊಂಡಿದ್ದ ಮಂಜುಳಾಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಸದ್ಯ ಆಕೆ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯಿಂದಲೇ ವಶಕ್ಕೆ ಪಡೆದಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ ಹತ್ತಕ್ಕೇರಿದಂತಾಗಿದೆ.
ಹದಿನಾಲ್ಕರಿಂದ ಹದಿನೆಂಟು ವಾರಗಳ ಅವಧಿಯಲ್ಲಿ ಭ್ರೂಣ ಲಿಂಗ ಪತ್ತೆಯಾಗುತ್ತದೆ. ಪ್ರಾರಂಭದಲ್ಲಿ ಗರ್ಭಿಣಿಯ ಬ್ಲಡ್ ಚೆಕ್ ಮಾಡುತ್ತಿದ್ದ ಆರೋಪಿಗಳು ನಂತರ ಆಕೆಗೆ ಗರ್ಭಪಾತದ ಮಾತ್ರೆ ನೀಡುತ್ತಿದ್ದರು. ಬಳಿಕ ರಕ್ತಸ್ರಾವವಾಗಿ ಭ್ರೂಣ ಹೊರ ಬರುತ್ತಿತ್ತು. ಈ ವೇಳೆ ಚಂದನ್ ಮತ್ತು ಮಂಜುಳಾ ಡೆಲಿವರಿ ಮಾಡಿಸಿದ ರೀತಿಯಲ್ಲಿ ಭ್ರೂಣ ಹೊರ ತೆಗೆಯುತ್ತಿದ್ದರು. ಈ ಕೆಲಸದಲ್ಲಿ ರಿಜ್ಮಾ ಹಾಗೂ ಮಂಜುಳಾ, ವೈದ್ಯ ಚಂದನ್'ಗೆ ನೆರವಾಗುತ್ತಿದ್ದರು. ಹತ್ಯೆಯ ನಂತರ ಭ್ರೂಣವನ್ನು ನದಿಗೆ ಎಸೆಯಲಾಗುತ್ತಿತ್ತು. 'ಕಳೆದ ಒಂದು ವರ್ಷದಿಂದ ತಾನು ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 70 ಗರ್ಭಪಾತ ಮಾಡಿರುವುದಾಗಿ' ಪೊಲೀಸರ ಮುಂದೆ ಮಂಜುಳಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಸಿಐಡಿಗೆ ಪ್ರಕರಣ ವರ್ಗಾವಣೆ : ಇನ್ನು ಪ್ರಕರಣದ ತನಿಖೆ ಇಂದು ಅಧಿಕೃತವಾಗಿ ಸಿಐಡಿಗೆ ವರ್ಗಾವಣೆಯಾಗಲಿದೆ. ಪ್ರಕರಣದ ಫೈಲ್ ಹಾಗೂ ಬಂಧಿತ ಆರೋಪಿಗಳನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಸಿಐಡಿ ವಶಕ್ಕೊಪ್ಪಿಸಲಿದ್ದಾರೆ. ಪ್ರಕರಣದ ಮುಂದಿನ ತನಿಖಾಧಿಕಾರಿಯಾಗಿ ಸಿಐಡಿಯ ಡಿವೈಎಸ್ಪಿ ನಾಗರಾಜ್ ನೇಮಕವಾಗಿದ್ದು, ಇದುವರೆಗಿನ ತನಿಖೆಯನ್ನು ಬೈಯಪ್ಪನಹಳ್ಳಿ ಇನ್ಸ್‌ಪೆಕ್ಟರ್ ಎಂ.ಪ್ರಶಾಂತ್ ನಡೆಸಿದ್ದರು. ಪ್ರಕರಣ ತನಿಖೆ ವೇಳೆ ಆರೋಪಿಗಳು ಕಳೆದ ಮೂರು ತಿಂಗಳ ಅವಧಿಯಲ್ಲಿ 242 ಭ್ರೂಣ ಹತ್ಯೆ ಮಾಡಿರುವುದು ಪತ್ತೆಯಾಗಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶಿಸಿತ್ತು.
ಇದಕ್ಕೂ ಮುನ್ನ ಸಿಎಂ ಸಿದ್ಧರಾಮಯ್ಯ ಅವರು ಮಂಡ್ಯದಲ್ಲಿ ಪತ್ತೆಯಾದ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿ, ಗೃಹಸಚಿವರಿಗೆ ನಿರ್ದೇಶನ ನೀಡಿದ್ದರು. ಇನ್ನೂ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಯುಕ್ತರಿಗೆ ಸೂಚನೆ ನೀಡಿದ್ದರು. ಈ ಸಂಬಂಧ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ : ಭ್ರೂಣ ಪತ್ತೆ, ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ: ಸಚಿವ ಗುಂಡೂರಾವ್