ಆನೇಕಲ್: ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 75 ವರ್ಷದ ವಯೋವೃದ್ಧೆ ಮುನಿಯಮ್ಮ ಎಂಬುವರನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆನೇಕಲ್ ಪೊಲೀಸ್ ಉಪ ವಿಭಾಗದ ಸರ್ಜಾಪುರ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ. ಸರ್ಜಾಪುರದ ವಾರ್ಡ್ ಸಂಖ್ಯೆ 6 ರ ಸ್ವಂತ ಮನೆಯಲ್ಲಿ ಮುನಿಯಮ್ಮ ಶವ ಪತ್ತೆಯಾಗಿದ್ದು, ತಲೆಗೆ ಬಲವಾದ ದೊಣ್ಣೆ ಮತ್ತಿತರೆ ಹರಿತವಾದ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಮೂರು ಮಕ್ಕಳು, ಮೊಮ್ಮಕ್ಕಳು ಇದ್ದರೂ ಮುನಿಯಮ್ಮ ಓರ್ವ ಸಾಕು ಹೆಣ್ಣು ಮಗಳಾದ ಚಂದ್ರಮ್ಮಳ ಬಳಿ ವಾಸವಿದ್ದರು. ತರಕಾರಿ ಮಾರಾಟ ಮಾಡಿ ಚಂದ್ರಮ್ಮಗೆ ಮದುವೆ ಮಾಡಿ ಕಳಿಸಿಕೊಟ್ಟಿದ್ದರು. ಆದ್ರೆ, ಚಂದ್ರಮ್ಮ ಗಂಡನನ್ನ ಬಿಟ್ಟು ಮುನಿಯಮ್ಮನ ಜೊತೆಯೇ ವಾಸವಿದ್ದರು. ಚಂದ್ರಮ್ಮ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ನಿಮ್ಹಾನ್ಸ್ನಲ್ಲಿ ಮುನಿಯಮ್ಮ ಚಿಕಿತ್ಸೆ ಕೊಡಿಸುತ್ತಿದ್ದರು.
ಸಾಕು ಮಗಳಾದ ಚಂದ್ರಮ್ಮನೇ ವೃದ್ಧೆಯ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕೇಳಿದ್ರೆ, ಮುಸುಕುಧಾರಿಗಳಾದ ಅಪರಿಚಿತರು ಬಂದು ಹತ್ಯೆ ಮಾಡಿದರು ಎಂದು ಚಂದ್ರಮ್ಮ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮನೆ ಬಿಟ್ಟು ಕೊಡದಿದ್ದಕ್ಕೆ ಅತ್ತೆಯನ್ನೇ ಹೊಡೆದು ಕೊಂದ ಸೊಸೆ
ಆಗಾಗ ಮಕ್ಕಳ ಮನೆಗೆ ಹೋಗಿ ಬರುತ್ತಿದ್ದ ಮುನಿಯಮ್ಮಗೆ ಸಾಕು ಮಗಳ ಮೇಲೆ ಪ್ರೀತಿ ಹೆಚ್ಚಿತ್ತು. ಈ ವಿಚಾರವಾಗಿ ಹೆತ್ತ ಮಕ್ಕಳ ಜೊತೆ ಮನಸ್ತಾಪವಾಗಿತ್ತು. ಹಣ್ಣು, ತರಕಾರಿ ವ್ಯಾಪಾರ ಮಾಡಿ ಚಂದ್ರಮ್ಮಳನ್ನು ಸಾಕುತ್ತಿದ್ದರು. ಆದರೆ, ಊಟ ಉಪಚಾರ, ಹಣದ ವಿಷಯಕ್ಕೆ ಸಂಬಂಧಿಸಿದಂತೆ ಸದಾ ಸಾಕು ಮಗಳು ಮುನಿಯಮ್ಮನ ಜೊತೆ ಜಗಳವಾಡುತ್ತಿದ್ದರು. ಈ ಸಂಬಂಧ ಚಂದ್ರಮ್ಮಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.